ಕಾರವಾರ: ನಿಗದಿ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ರಿವರ್ ರ್ಯಾಪ್ಟಿಂಗ್ (River Rafting) ಬೋಟ್ನಲ್ಲಿ ಕುಳ್ಳಿರಿಸಿ ರ್ಯಾಪ್ಟಿಂಗ್ ಮಾಡಿದ ಪರಿಣಾಮ ನದಿಯಲ್ಲಿ ಬೋಟ್ ಮುಳುಗುವ ಹಂತ ತಲುಪಿ ಮಕ್ಕಳು ಸೇರಿದಂತೆ 12 ಜನ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ನಡೆದಿದೆ. ರಬ್ಬರ್ ಬೋಟ್ನಲ್ಲಿ ಆರು ಜನಕ್ಕಿಂತ ಹೆಚ್ಚು ಜನರನ್ನು ಹಾಕಿ ರಿವರ್ ರ್ಯಾಪ್ಟಿಂಗ್ ಮಾಡುವಂತಿಲ್ಲ. ಆದರೆ ಖಾಸಗಿ ಆಯೋಜಕರು ಅನುಮತಿ ಇಲ್ಲದೇ 12 ಜನ ಪ್ರವಾಸಿಗರನ್ನು ಬೋಟ್ನಲ್ಲಿ ರ್ಯಾಪ್ಟಿಂಗ್ಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಬೋಟ್ ಬಾರ ಹೆಚ್ಚಾಗಿ ಮುಳುಗುವ ಹಂತ ತಲುಪಿದ್ದು, ನೀರಿನಲ್ಲಿ ಬಿದ್ದಿದ್ದ ಮಕ್ಕಳು ಸೇರಿ 12 ಜನರು ಕೊಚ್ಚಿ ಹೋಗುವ ಮುನ್ನ ಕೂದಲೆಳೆ ಅಂತರದಲ್ಲಿ ಪ್ರವಾಸಿಗರನ್ನು ತಕ್ಷಣ ರಕ್ಷಣೆ ಮಾಡಲಾಗಿದೆ. ಪ್ರವಾಸಿಗರು ಲೈಫ್ ಜಾಕೇಟ್ ಹಾಕಿದ ಪರಿಣಾಮ ಅನಾಹುತ ತಪ್ಪಿದೆ. ಘಟನೆ ಸಂಬಂಧ ಜೋಯಿಡಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
