ಬೆಂಗಳೂರು,ಏ.15-ಮಾನ್ಯ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರೇ ನಿಮ್ಮ ಪಕ್ಷದಲ್ಲೇ ಕೂತಿರುವ ಆ ಮಹಾನ್ ನಾಯಕ ಮುಂದೊಂದು ದಿನ ನಿಮಗೂ ಕೂಡ ಖೆಡ್ಡಾ ತೋಡಬಹುದು.
ಬೆನ್ನಿಗೆ ಚೂರಿ ಇರಿಯುವ ಮೊದಲು ಯಾವುದಕ್ಕೂ ಹುಷಾರು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಅಧಿಕಾರದ ಹಪಾಹಪಿಗೆ ಬಿದ್ದಿರುವ ಬಂಡೆ ಈಗ ಎಲ್ಲೋ ಕುಳಿತು ಇನ್ನೆಲ್ಲೋ ಬಾಂಬ್ ಸಿಡಿಸುವ ಕಲೆಯನ್ನು ರಕ್ತಗತ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಇದು ನಿಮ್ಮ ಕೊರಳಿಗೆ ಉರಳಾದರೂ ಅಚ್ಚರಿಯಿಲ್ಲ.ಬೇಗ ಎಚ್ಚೆತ್ತುಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಆ ಮಹಾನ್ ನಾಯಕನಿಗೆ ನೀವು ಪ್ರಬಲ ಸ್ಪರ್ಧೆಯಾಗಬಹುದು.ಅದಕ್ಕಾಗಿ ನಿಮಗೆ ಗೊತ್ತಿಲ್ಲದಂತೆಯೇ ಮುಗಿಸಲು ಯಾವುದಾದರೂ ಹೊಸ ನಾಟಕ ಸೃಷ್ಟಿಸಬಹುದು. ಅಧಿಕಾರಕ್ಕಾಗಿ ಏನನ್ನೂ ಮಾಡದೆ ಬಿಡುವವರಲ್ಲ ಸ್ವಯಂಘೋಷಿತ ಡೈನಾಮಿಕ್ ಬಂಡೆ ಎಂದು ಸಲಹೆ ಮಾಡಿದ್ದಾರೆ.