ಬೆಳಗಾವಿ : ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಹಿಂದೆ ಮಹಾನಾಯಕನ ಕೈವಾಡ ಇದ್ದು, ಸೋಮವಾರ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ನಾನು ಹೃದಯ ಪೂರ್ವಕವಾಗಿ ಸ್ವಾಗತಿಸುವೆ. ದಾಖಲೆ ಬಿಡುಗಡೆಗಾಗಿ ಅವರು ಸೋಮವಾರದವರೆಗೆ ಕಾಯುವುದು ಬೇಡ. ಧಾರಾವಾಹಿಯಲ್ಲಿ ಕುತೂಹಲ ಕ್ರಿಯೇಟ್ ಮಾಡುವ ರೀತಿ ಇಲ್ಲಿ ಮಾಡುವುದು ಬೇಡ. ದಾಖಲೆಗಳಿದ್ದರೆ ಇಂದೇ, ಈ ಘಳಿಗೆಯಲ್ಲಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಅವರ ಬೇಜವಾಬ್ದಾರಿ ಹೇಳಿಕೆಯಿಂದ ಗೊಂದಲ ಸೃಷ್ಟಿ ಆಗುತ್ತಿದೆ. ನಾವು ಹೋರಾಟ ಮಾಡಿದ್ದು, ಸಂತೋಷ ಪಾಟೀಲ್ ಕುಟುಂಬಕ್ಕೆ ನ್ಯಾಯ ಕೊಡಿಸಲು. ಕೆ ಎಸ್ ಈಶ್ವರಪ್ಪ ಬಂಧನ ಆಗಬೇಕು. ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು. ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟವರು ಯಾರು?. ಇಂತವರ ರಕ್ಷಣೆ ಮಾಡಿದ್ರೆ ಜನ ಸಾಮಾನ್ಯರ ಹಿತ ಕಾಪಾಡುವುದು ಹೇಗೆ?. ಗುತ್ತಿಗೆದಾರರ ಅಳಲು ಕೇಳುವವರು ಯಾರು?.
ಪ್ರತಿ ಇಲಾಖೆಯ ಗುತ್ತಿಗೆದಾರರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ಪಕ್ಷ ನಾಳೆಯಿಂದ ಜಿಲ್ಲಾವಾರು ಪ್ರವಾಸ ಕಾರ್ಯಕ್ರಮ ಆರಂಭಿಸಲಿದೆ. ವಿಧಾನಸೌಧದಲ್ಲಿ ಸಿದ್ದರಾಮಯ್ಯ, ಎಂ.ಬಿ ಪಾಟೀಲ್, ಡಿಕೆಶಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಏ.17ರಂದು ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.