ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ರಾಜಕೀಯ ಕ್ಷೇತ್ರದಲ್ಲಿ ಮತ್ತೆ ಎಲ್ಲರೂ ತಿರುಗಿ ನೋಡುವಂತಹ ಸುದ್ದಿ ಮಾಡಿದೆ. ಜಿಲ್ಲೆಯ ಜಿದ್ದಾಜಿದ್ದಿನ ರಾಜಕಾರಣ ಬಿಜೆಪಿ ಸರಕಾರದ ಇಬ್ಬರು ಪ್ರಭಾವಿ ರಾಜಕಾರಣಿಗಳ ತಲೆದಂಡವಾಗುವಂತೆ ಮಾಡಿರುವುದೇ ಇದಕ್ಕೆ ಸಾಕ್ಷಿ.
ಈ ಎರಡೂ ತಲೆದಂಡದಲ್ಲಿ ಕಾಂಗ್ರೆಸ್‌ನ ಒಗ್ಗಟ್ಟಿನ ಹೋರಾಟಕ್ಕಿಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ರೀತಿಯ ಶಪಥ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಗಂಭೀರ ಆರೋಪ ಹೊತ್ತ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸಿಎಂ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ಭ್ರಷ್ಟಾಚಾರ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಪ್ರಕಟಿಸಿದ್ದಾರೆ. ಈ ಇಬ್ಬರೂ ಪ್ರಭಾವಿಗಳ ರಾಜೀನಾಮೆಗೆ ಬೆಳಗಾವಿಯ ರಾಜಕಾರಣವೇ ಕಾರಣ ಎಂಬುದು ಸತ್ಯ. ಎರಡೂ ಪ್ರಕರಣಗಳಲ್ಲಿ ರಾಜಕೀಯ ಪ್ರತಿಷ್ಠೆಯೇ ಪರಿಣಾಮ ಬೀರಿದೆ.
ಈಶ್ವರಪ್ಪ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಿಯೂ ಬೆಳಗಾವಿ ಜಿಲ್ಲೆಯ ರಾಜಕಾರಣದ ಪ್ರಸ್ತಾವ ಮಾಡಿಲ್ಲ. ಆದರೆ ಗುರುವಾರ ಒಮ್ಮೆಲೇ ಅಖಾಡಕ್ಕೆ ಇಳಿದಿರುವ ರಮೇಶ ಜಾರಕಿಹೊಳಿ ಈ ಪ್ರಕರಣದ ಹಿಂದೆ “ಮಹಾನ್ ನಾಯಕ’ರ ತಂಡದ ಕೈವಾಡವಿದೆ ಎನ್ನುವ ಮೂಲಕ ಶಿವಕುಮಾರ್ ಹಾಗೂ ಹೆಬ್ಟಾಳ್ಕರ್ ಕಡೆ ಬೊಟ್ಟು ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ರಾಜಕಾರಣ ಎಂದಾಕ್ಷಣ ಎಲ್ಲರ ಗಮನ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಕಡೆ ತಿರುಗುತ್ತದೆ. ಇಬ್ಬರದೂ ಜಿದ್ದಾಜಿದ್ದಿನ ಸೆಣಸಾಟ. ಇದು ರಾಜ್ಯಮಟ್ಟದಲ್ಲಿ ಅಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗುತ್ತಿದೆ.
ರಮೇಶ ಜಾರಕಿಹೊಳಿ ನೇರವಾಗಿ ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ. ತಮ್ಮ ಸಿ.ಡಿ. ಮಾಡಿದ “ಮಹಾನ್ ನಾಯಕ’ರ ತಂಡವೇ ಈ ಪ್ರಕರಣದಲ್ಲೂ ಕೆಲಸ ಮಾಡಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ತಮ್ಮ ಬದ್ಧ ವೈರಿಯ ಮೇಲೆ ಆರೋಪ ಮಾಡಿದ್ದಾರೆ.