ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಯಿಂದಾಗಿ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ ತ್ರಿಮೂರ್ತಿಗಳ ಅಧಿಕಾರ ರಾಜಕಾರಣದ ಶಕೆ ಮುಗಿಯಿತೇ ಎಂಬ ಪ್ರಶ್ನೆ ಮೂಡಲಾರಂಭಿಸಿದೆ.
75ರ ಹೊಸ್ತಿಲಲ್ಲಿರುವ ಬಿ.ಎಸ್. ಯಡಿಯೂರಪ್ಪ, ಕೆ.ಎಸ್.
ಈಶ್ವರಪ್ಪ ಹಾಗೂ ಡಿ.ಎಚ್. ಶಂಕರಮೂರ್ತಿ ಅವರಿಗೆ ಇನ್ನು ರಾಜಕೀಯದಲ್ಲಿ ಯಾವುದೇ ಪ್ರಮುಖ ಅಧಿಕಾರ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಸ್ಥಾನಮಾನ ನೀಡಬಾರದು ಎಂಬ ನಿಯಮವಿದೆ. ಈಗಾಗಲೇ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಿ.ಎಚ್.ಶಂಕರಮೂರ್ತಿ ಚುನಾವಣೆ ರಾಜಕಾರಣದಿಂದ ದೂರ ಉಳಿದಿದ್ದಾರೆ. ಸಚಿವ ಸ್ಥಾನದಿಂದ ಕೆಳಗಿಳಿಯುತ್ತಿರುವ ಈಶ್ವರಪ್ಪ ಅವರಿಗೆ ಈಗ 74 ವರ್ಷ. ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ 75 ವರ್ಷ ಪೂರೈಸುತ್ತಾರೆ. ಪಕ್ಷದ ನಿಯಮದ ಪ್ರಕಾರ ಟಿಕೆಟ್ ವಂಚಿತರಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.
ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಈಶ್ವರಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಚರ್ಚೆ ಜೋರಾಗಿತ್ತಾದರೂ ಕೊನೆ ಕ್ಷಣದಲ್ಲಿ ಸಂಪುಟ ಸೇರಿ ಮತ್ತೆ ಅದೇ ಖಾತೆಯನ್ನು ಪಡೆದುಕೊಂಡರು. ಆದರೆ ಈಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ತಳುಕು ಹಾಕಿಕೊಂಡ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈಶ್ವರಪ್ಪ ಮತ್ತೆ ಸಂಪುಟ ಸೇರುವುದು ಅನುಮಾನ ಎಂದೇ ಪಕ್ಷದ ಮೂಲಗಳು ತಿಳಿಸುತ್ತವೆ.