ಚನ್ನಪಟ್ಟಣ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೇ ಪ್ರಭಾವಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಕಾರಣ ಶುಕ್ರವಾರ ತಹಸೀಲ್ದಾರ್ ಎಲ್.ನಾಗೇಶ್ ವರ್ಗಾವಣೆ ವಿಚಾರದಲ್ಲಿ ನಡೆದ ಬೆಳವಣಿಗೆ.
ಈ ಹಿಂದಿನಿಂದಲೂ ತಹಸೀಲ್ದಾರ್ ಎಲ್.ನಾಗೇಶ್ ವರ್ಗಾವಣೆ ವಿಚಾರದಲ್ಲಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ನಡುವೆ ಶೀತಲ ಸಮರ ನಡೆಯುತಿತ್ತು. ಶುಕ್ರವಾರ ಸಂಜೆ ತಹಸೀಲ್ದಾರ್ ವರ್ಗಾವಣೆ ಆದೇಶ ಹೊರಬಿದ್ದಿತ್ತು. ತಹಸೀಲ್ದಾರ್ ವರ್ಗಾವಣೆ ಆದೇಶವನ್ನು ಖುದ್ದು ನಿಂತು ಸಿ.ಪಿ.ಯೋಗೇಶ್ವರ್ ಮಾಡಿಸಿದ್ದರು ಎಂಬ ಮಾಹಿತಿ ಇತ್ತು. ಯೋಗೇಶ್ವರ್ ಬೆಂಬಲಿಗರು ಸಹ ತಹಸೀಲ್ದಾರ್ ವರ್ಗಾವಣೆ ವಿಚಾರದಲ್ಲಿ ಸಂಭ್ರಮಿಸಿದ್ದರು. ಆದರೆ, ರಾತ್ರಿಯಾಗುತ್ತಲೇ ಈ ವರ್ಗಾವಣೆ ಆದೇಶ ರದ್ದಾಗಿದೆ.
ಕುಮಾರಸ್ವಾಮಿ ತನ್ನ ಪ್ರಭಾವ ಬಳಸಿ ತಹಸೀಲ್ದಾರ್ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಿಎಂ ಜೊತೆಗಿನ ತನ್ನ ಭಾಂದವ್ಯ ಗಟ್ಟಿಯಾಗಿದೆ ಎಂದು ಎಚ್ಡಿಕೆ ನಿರೂಪಿಸಿದ್ದಾರೆ. ಕೆಲದಿನಗಳ ಹಿಂದೆ ಸಿ.ಪಿ.ಯೋಗೇಶ್ವರ್, ನಮ್ಮ ಪಕ್ಷದ ನಾಯಕರೇ ಕುಮಾರಸ್ವಾಮಿ ಅವರಿಗೆ ಸಹಕಾರ ನೀಡುತ್ತಾರೆ ಎಂದಿದ್ದರು. ಈ ಆರೋಪಕ್ಕೆ ತಹಸೀಲ್ದಾರ್ ವರ್ಗಾವಣೆ ವಿಚಾರ ಪುಷ್ಟಿ ನೀಡಿದೆ.