ಬ್ರಿಟನ್ ನ ಹಣಕಾಸು ಸಚಿವ ರಿಷಿ ಸುನಕ್ ಅವರ ಪತ್ನಿ, ಭಾರತೀಯ ಮೂಲದ ಅಕ್ಷತಾ ಮೂರ್ತಿ ಅಲ್ಲಿನ ರಾಣಿಗಿಂತಲೂ ಸಿರಿವಂತೆ ಅನ್ನೋ ವರದಿಗಳು ಹರಿದಾಡ್ತಾ ಇವೆ. ಅಕ್ಷತಾ ಮೂರ್ತಿ, ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ. ತಂದೆ ಸಹ ಬಿಲಿಯನೇರ್. ಎಂಜಿನಿಯರ್ ಆಗಿರೋ ಅಕ್ಷತಾ ದಾನ, ಧರ್ಮದಲ್ಲೂ ಮುಂದಿದ್ದಾರೆ.
ರಿಷಿ ಸುನಕ್, ಬ್ರಿಟನ್ ನ ಭವಿಷ್ಯದ ಪ್ರಧಾನಿಯೆಂದೇ ಬಿಂಬಿತರಾಗಿದ್ದರು. ಆದ್ರೀಗ ಬೆಲೆ ಏರಿಕೆಯಿಂದಾಗಿ ಅವರ ಜನಪ್ರಿಯತೆ ಕುಸಿದಿದೆ. ಇದರ ಜೊತೆ ಜೊತೆಗೆ ಅಕ್ಷತಾ ಮೂರ್ತಿ ಅವರ ವಿದೇಶಿ ಆದಾಯವನ್ನು ಬ್ರಿಟಿಷ್ ತೆರಿಗೆ ಅಧಿಕಾರಿಗಳಿಂದ ಮುಚ್ಚಿಡಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಅಕ್ಷತಾರ ತಂದೆ, 75ರ ಪ್ರಾಯದ ನಾರಾಯಣಮೂರ್ತಿ 1981ರಲ್ಲಿ ಇನ್ಫೋಸಿಸ್ ಅನ್ನು ಹುಟ್ಟುಹಾಕಿದ್ದರು. ಈ ಸಂಸ್ಥೆ ಭಾರತದ ಟೆಕ್ ಜಗತ್ತಿನಲ್ಲಿ ಆಮೂಲಾಗ್ರ ಬದಲಾವಣೆಯನ್ನೇ ತಂದಿದೆ.
ಪತ್ನಿ ಸುಧಾಮೂರ್ತಿ ಅವರಿಂದ 10 ಸಾವಿರ ರೂಪಾಯಿ ಸಾಲ ಪಡೆದು ಕಟ್ಟಿದ ಕಂಪನಿಯ ಮೌಲ್ಯ ಈಗ 100 ಬಿಲಿಯನ್ ಡಾಲರ್. ಸುಧಾ ಮೂರ್ತಿ ಕೂಡ ಟಾಟಾ ಮೋಟರ್ಸ್ ನ ಮೊದಲ ಮಹಿಳಾ ಎಂಜಿನಿಯರ್ ಎನಿಸಿಕೊಂಡಿದ್ದರು.