ಬಾಗಲಕೋಟೆ: ಬಾದಾಮಿ ಮತ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಗರು ಕೆಲಸ ಮಾಡದಿದ್ರೆ ನಾನೇ ಬಂದು ಕೆಲಸ ಮಾಡಿ ಕೊಡುತ್ತೇನೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನಾನೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇನೆಂದು ಪರೋಕ್ಷವಾಗಿ ಹೇಳಿದರು.
ಆಲೂರ ಎಸ್.ಕೆ ಗ್ರಾಮದಲ್ಲಿ ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಮಲಪ್ರಭಾ ನದಿಗೆ ಬ್ರಿಡ್ಜ್ ಕಮ್ ಬ್ಯಾರೇಜ್ ಯೋಜನೆಯನ್ನ ಈ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವ ಕಾರಜೋಳ ಮಾಡಲಿ. ಒಂದು ವೇಳೆ ಮಾಡದೆ ಹೋದ್ರೆ ನಾನೇ ಬಂದು ಮಾಡುತ್ತೇನೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕೊಟ್ಟ ಭರವಸೆಯನ್ನ ನಾವೇ ಈಡೇರಿಸುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದರು.