ಬೆಂಗಳೂರು: ‘ಐಐಟಿ ಕಾನ್ಪುರ ತಂಡದ ಅಧ್ಯಯನ ಪ್ರಕಾರ ಆಗಸ್ಟ್‌ನಲ್ಲಿ ಕೋವಿಡ್ ನಾಲ್ಕನೇ ಅಲೆ ಬರುವ ಸಾಧ್ಯತೆ ಇದೆ. ಆದರೆ, ದೇಶದಲ್ಲಿ ಲಸಿಕಾ ಅಭಿಯಾನ ವ್ಯಾಪಕವಾಗಿ ಕೈಗೊಂಡಿರುವುದರಿಂದ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ.
ಸುಧಾಕರ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಶಶಿಲ್ ಜಿ. ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಹೊಸ ತಳಿ ಬಿಎ2 ಫಿಲಿಪ್ಪೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದು, 40 ದೇಶಗಳಲ್ಲಿ ಹಬ್ಬಿದೆ. ಹೀಗಾಗಿ, ಎಚ್ಚರಿಕೆ ಕ್ರಮಗಳು ಅಗತ್ಯ’ ಎಂದು ವಿವರಿಸಿದರು.
‘ಮುಖ್ಯಮಂತ್ರಿ ಅವರ ಜತೆಯೂ ಈ ಬಗ್ಗೆ ಸಭೆ ನಡೆಸಲಾಗುವುದು. ರಾಜ್ಯದಲ್ಲಿ 10.25 ಕೋಟಿಗೂ ಹೆಚ್ಚು ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ. ಇದರಲ್ಲಿ 4.97 ಕೋಟಿಗೂ ಹೆಚ್ಚು ಮಂದಿ ಮೊದಲ ಡೋಸ್ ಪಡೆದಿದ್ದಾರೆ. 4.76 ಕೋಟಿಗೂ ಹೆಚ್ಚು ಮಂದಿ ಎರಡನೇ ಡೋಸ್ ಪಡೆದಿದ್ದು, ಶೇಕಡ 96 ರಷ್ಟು ಪ್ರಗತಿ ಸಾಧಿಸಲಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ನೀಡುವ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ’ ಎಂದು ವಿವರಿಸಿದರು.
‘ಕೋವಿಡ್ ತಡೆಯಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮೂರು ಅಲೆಗಳಿಂದಾಗಿ ಸಾಕಷ್ಟು ಅನುಭವ ದೊರೆತಿದ್ದು, ಎಲ್ಲ ರೀತಿಯಲ್ಲೂ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 55,256 ಆಮ್ಲಜನಕ ಹೊಂದಿರುವ ಹಾಸಿಗೆಗಳಿವೆ. 165 ಪ್ರಯೋಗಾಲಯಗಳಿವೆ. ಹೀಗಾಗಿ, ನಾಲ್ಕನೇ ಅಲೆ ಬಂದರೂ ಪರಿಣಾಮಕಾರಿ ಎದುರಿಸುವ ಸಾಮರ್ಥ್ಯ ನಮಗಿದೆ’ ಎಂದು ತಿಳಿಸಿದರು.
Laxmi News 24×7