ಬೆಂಗಳೂರು: ರಾಜ್ಯ ವಿಧಾನಮಂಡಲ ಉಭಯ ಸದನಗಳ ಅಧಿವೇಶನದಲ್ಲಿ ಪಾಲ್ಗೊಂಡು ಪಕ್ಷದ ನಾಯಕರ ಬಲಪಡಿಸುವುದಕ್ಕಿಂತ ಪಕ್ಷ ಸಂಘಟನೆ ಮುಖ್ಯ ಎಂಬ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕುಮಾರ್ ಬಂದಿದ್ದಾರೆ.
ಈ ಹಿನ್ನೆಲೆ ವಿಧಾನಮಂಡಲ ಉಭಯ ಸದನಗಳ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಮಾರ್ಚ್ 22 ಮತ್ತು 23 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಪಕ್ಷ ಸಂಘಟನೆ ಹಾಗೂ ಪ್ರಸ್ತುತ ನಡೆಯುತ್ತಿರುವ ಸದಸ್ಯತ್ವ ನೋಂದಣಿ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಲು ಕಲಬುರಗಿ, ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಾದ್ಯಂತ ಡಿಕೆಶಿ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾ.22 ರಂದು 8.40ಕ್ಕೆ ಬೆಂಗಳೂರಿಂದ ವಿಮಾನದ ಮೂಲಕ ಕಲಬುರಗಿಗೆ ಪ್ರಯಾಣ ಬೆಳೆಸುವ ಡಿಕೆಶಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಫ್ಜಲ್ಪುರ, ಜೇವರ್ಗಿ, ಚಿತ್ತಾಪುರ, ಸೇಡಂ, ಚಿಂಚೋಳಿ, ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ ಹಾಗೂ ಆಳಂದ ವಿಧಾನಸಭಾ ಕ್ಷೇತ್ರಗಳ ಪ್ರಗತಿ, ಸದಸ್ಯತ್ವ ನೊಂದಣಿ ಅಭಿಯಾನದ ಪರಿಶೀಲನಾ ಸಭೆ ನಡೆಸಲಿದ್ದಾರೆ. ನಂತರ ಕಲಬುರಗಿಯಿಂದ ಬೀದರ್ ಗೆ ಪ್ರಯಾಣ ಕೈಗೊಂಡು, ಅಂದು ಸಂಜೆ 4.30 ರಿಂದ ಸಂಜೆ 7ರವರೆಗೆ ಬೀದರ್‌ನಲ್ಲಿ ಬಸವಕಲ್ಯಾಣ, ಹುಮನಾಬಾದ್, ಬೀದರ್ ದಕ್ಷಿಣ, ಬೀದರ್, ಬಾಲ್ಕಿ, ಔರಾದ್ ವಿಧಾನಸಭಾ ಕ್ಷೇತ್ರಗಳ ಸದಸ್ಯತ್ವ ನೋಂದಣಿ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಂಡಿದ್ದಾರೆ. ಅಂದು ರಾತ್ರಿ ಕಲಬುರಗಿಗೆ ವಾಪಸಾಗಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ ವಿವಿಧ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.