ಬೆಂಗಳೂರು: ವಿಧಾನಸಭಾ ಚುನಾವಣೆಗೂ ಮುನ್ನ ಮತ್ತೊಂದು ಚುನಾವಣೆಗೆ ರಾಜ್ಯದ ರಾಜಕೀಯ ಪಕ್ಷಗಳು ಸಜ್ಜಾಗಬೇಕಾಗಿದೆ. 167 ಎಪಿಎಂಸಿಗಳ ಪೈಕಿ 160ಕ್ಕೆ ಅವಧಿ ಮುಗಿದಿದ್ದು, ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಕೃಷಿ ಮಾರುಕಟ್ಟೆ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.
ಹೀಗಾಗಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಿಗದಿಯಾಗಬಹುದೆನ್ನಲಾಗಿದೆ. ಎಪಿಎಂಸಿಗಳಿಗೆ ಫೆಬ್ರವರಿ ಅಂತ್ಯಕ್ಕೆ ಅವಧಿ ಮುಕ್ತಾಯವಾಗಿದ್ದು, ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಮೀಸಲಾತಿ ನಿಗದಿ ಮಾಡಿ ಚುನಾವಣೆ ನಡೆಸಬೇಕಾಗಿದೆ. ಅವಧಿ ಮುಗಿಯುವ ಸಂದರ್ಭದಲ್ಲಿ ಕರೊನಾದಿಂದ ಎಲ್ಲ ಚುನಾವಣೆಗಳನ್ನು ಮುಂದೂಡಲಾಗಿತ್ತು. ಇದೀಗ ನಿರ್ಬಂಧ ತೆರವಾಗಿದೆ.
ಪ್ರತಿ ಎಪಿಎಂಸಿಗೆ 11 ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕಾಗಿದೆ. ಕೃಷಿ, ತೋಟಗಾರಿಕೆ, ಟ್ರೇಡರ್ ಸೇರಿ ವಿವಿಧ ಕ್ಷೇತ್ರಗಳಿಂದ ನಿರ್ದೇಶಕರ ಆಯ್ಕೆ ನಡೆಯಬೇಕಾಗುತ್ತಿದೆ. 33 ಲಕ್ಷ ಮತದಾರರು ಇದ್ದು, ಸರ್ಕಾರ ಮೂವರನ್ನು ನಾಮ ನಿರ್ದೇಶನ ಮಾಡಲಿದೆ. ಅವರಿಗೂ ಮತದಾನದ ಹಕ್ಕು ನೀಡಲಾಗಿದೆ. ಚುನಾವಣೆಯ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.ಎಪಿಎಂಸಿ ಚುನಾವಣೆ ರಾಜಕೀಯ ಪಕ್ಷಗಳ ಚಿನ್ಹೆ ಮೇಲೆ ನಡೆಯುವುದಿಲ್ಲ. ಆದರೂ ಸ್ಥಳೀಯ ಶಾಸಕರು, ಶಾಸಕ ಸ್ಥಾನದ ಆಕಾಂಕ್ಷಿಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವೇ ಆಗಿರುತ್ತದೆ. ಯಾವ ಪಕ್ಷ ಹೆಚ್ಚು ಗೆಲ್ಲುವುದೋ ಆ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಅನುಕೂಲವಾಗುತ್ತದೆ ಎಂಬುದು ರಾಜಕೀಯ ಲೆಕ್ಕಾಚಾರ.