ಮಂಗಳೂರು: ನಾನು ಭಗವದ್ಗೀತೆ, ಬೈಬಲ್, ಕುರಾನ್ ಯಾವುದರ ವಿರೋಧಿಯೂ ಅಲ್ಲ. ನಮ್ಮದು ಬಹುಸಂಸ್ಕೃತಿ ಇರುವ ರಾಷ್ಟ್ರ, ನಮ್ಮಲ್ಲಿ ಸಹಬಾಳ್ವೆ ಇರಬೇಕು. ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇರೋನು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನದ್ದು ಸಾಫ್ಟ್ ಮತ್ತು ಹಾರ್ಡ್ ಹಿಂದುತ್ವ ಅಂತ ಇಲ್ಲ. ನಾವು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರು. ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಕೊಡುತ್ತೇವೆ ಎಂದರು.ಶಾಲೆಗಳಲ್ಲಿ ಭಗವದ್ಗೀತೆ ಕಲಿಸೋ ಬಗ್ಗೆ ಚಿಂತನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೈತಿಕ ಶಿಕ್ಷಣ ಕಲಿಸಲು ನಮ್ಮ ಯಾವುದೇ ತಕರಾರು ಇಲ್ಲ. ನಾವು ಸಂವಿಧಾನದ ಜಾತ್ಯಾತೀತ ತತ್ವಗಳನ್ನು ನಂಬುತ್ತೇವೆ. ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನು ಹೇಳಿಕೊಟ್ಟರೂ ನಮ್ಮ ವಿರೋಧ ಇಲ್ಲ. ಆದರೆ ಮಕ್ಕಳಿಗೆ ಅಗತ್ಯವಾಗಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಭಗವದ್ಗೀತೆ ಬಗ್ಗೆ ಸರ್ಕಾರ ತೀರ್ಮಾನ ಮಾಡಿಲ್ಲ, ಗುಜರಾತ್‍ನಲ್ಲಿ ಮಾಡಿದ್ದಾರೆ ಅಷ್ಟೇ. ಭಗವದ್ಗೀತೆ ಮನೆಯಲ್ಲಿ ಹೇಳಿಕೊಡ್ತಾರೆ, ದೇವರ ಬಗ್ಗೆ ಹೇಳ್ತಾರೆ. ರಾಮಾಯಣ, ಮಹಾಭಾರತ ಎಲ್ಲಾನೂ ಮನೆಯಲ್ಲಿ ಹೇಳಿ ಕೊಡ್ತಾರೆ. ನೈತಿಕ ಶಿಕ್ಷಣ ಬೇಕು, ಆದರೆ ಸಂವಿಧಾನಕ್ಕೆ ವಿರುದ್ಧವಾಗಿ ಯಾವುದೂ ನಡೆಯಬಾರದು ಎಂದು ತಿಳಿಸಿದರು.