ಭೀಮಳ್ಳಿ (ಕಲಬುರಗಿ ತಾ.): ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ 20 ವರ್ಷವಾದರೂ ಪರಿಹಾರ ನೀಡದ ಕಾರಣ, ರೋಸಿಹೋದ ಕೆಲ ರೈತರು ರಸ್ತೆ ಅಗೆದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ವಿರೋಧಿಸಿದರು.
ಭೀಮಳ್ಳಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇದನ್ನು ತಿಳಿದು ಭೂಮಿ ಕಳೆದುಕೊಂಡ ರೈತರು, ಜಿಲ್ಲಾಧಿಕಾರಿ ಬರುವ ಮುನ್ನವೇ ಬುಲ್ಡೋಜರ್ ನೆರವಿನಿಂದ ಗ್ರಾಮದ ಮುಖ್ಯರಸ್ತೆ ಅಗೆದು ಗ್ರಾಮ ವಾಸ್ತವ್ಯ ಧಿಕ್ಕರಿಸಿದರು.
ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್, ಕಂದಾಯ ಅಧಿಕಾರಿಗಳು, ಪೊಲೀಸರು ಅಗೆದ ರಸ್ತೆ ಮುಚ್ಚುವಂತೆ ಮನವಿ ಮಾಡಿದರು.
ಪರಿಹಾರ ನೀಡುವವರಗೂ ರಸ್ತೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟುಹಿಡಿದರು. ಆಗ ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ಬುಲ್ಡೋಜರ್ ತಂದು ರಸ್ತೆ ತಗ್ಗು ಮುಚ್ಚಿಸಿದರು.
ಇದರಿಂದ ಆಕ್ರೋಶಗೊಂಡ ರೈತರಾದ ಶಿವಲಿಂಗಪ್ಪ ಉಪ್ಪಿನ, ಇವರ ಸಹೋದರ ವೀರಣ್ಣ ಉಪ್ಪಿನ, ಇವರ ಪುತ್ರ ಶರಣಬಸಪ್ಪ ಉಪ್ಪಿನ ಅವರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.