ರಾಯಚೂರು: ಪ್ರೀತಿ ಕುರುಡು ಅಂತಾರೆ ನಿಜ. ಆದರೆ, ಪ್ರೀತಿಯ ಮಾಯೆಯಲ್ಲಿ ಬಿದ್ದು ಏನನ್ನು ಯೋಚಿಸದೇ ಕಣ್ಣಿದ್ದು ಕುರುಡರಾದರೆ ಏನಾಗಬಹುದು ಎಂಬುದಕ್ಕೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಪ್ರೀತಿಸಿ ಮದುವೆಯಾದ ಗಂಡನಿಗಾಗಿ ಪ್ರೌಢಶಾಲಾ ಶಿಕ್ಷಕಿಯೊಬ್ಬಳು ಇದೀಗ ಧರಣಿ ಕುಳಿತಿದ್ದಾಳೆ. ಗಂಡನಿಲ್ಲದೇ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಗಂಡನಿಗಾಗಿ ಗಂಡನ ಮನೆಯ ಮುಂದೆಯೇ ಶಿಕ್ಷಕಿ ಪ್ರತಿಭಟನೆಗೆ ಕುಳಿತಿದ್ದಾಳೆ.
ಶಿಕ್ಷಕಿಯ ಹೆಸರು ಶಾಂತಾಬಾಯಿ. ಇವರು ಪ್ರತಾಪ್ ಎಂಬಾತನನ್ನು ಪ್ರೀತಿಸಿ 2017ರ ಅಕ್ಟೋಬರ್ನಲ್ಲಿ ಮದುವೆಯಾಗಿದ್ದರು. ಆದರೆ, ಪ್ರತಾಪ್ ಶಾಂತಾಬಾಯಿಯ ಜತೆ ಮದ್ವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು, ಮನೆಯವರ ಒತ್ತಾಯಕ್ಕೆ ಮಣಿದು ಶಾಂತಾಬಾಯಿಗೆ ಕೈಕೊಟ್ಟು 2018ರಲ್ಲಿ ಇನ್ನೊಬ್ಬಳ ಜತೆ ಮದ್ವೆಯಾಗಿದ್ದಾನೆ.
ಸಂತ್ರಸ್ತೆ ಶಾಂತಾಬಾಯಿಗೆ ಈ ಮೊದಲೇ ಮದ್ವೆಯಾಗಿತ್ತು. ಆದರೆ, ಗಂಡನಿಗೆ ಡಿವೋರ್ಸ್ ಕೊಟ್ಟಿದ್ದರು. ಈ ಎಲ್ಲಾ ವಿಷಯವನ್ನು ತಿಳಿದೇ ಶಾಂತಾಬಾಯಿಯನ್ನ ಪ್ರತಾಪ್, ಪ್ರೀತಿಸಿ ಮದ್ವೆಯಾಗಿದ್ದ. ಇದೀಗ ಅಂತರ್ಜಾತಿ ವಿವಾಹ ಕಾರಣ ನೀಡಿ, ಶಾಂತಾಬಾಯಿಗೆ ಮೋಸ ಮಾಡಿ ಮತ್ತೊಂದು ಮದ್ವೆಯಾಗಿದ್ದಾನೆ.