ಬೆಂಗಳೂರು: ವಿಧಾನಪರಿಷತ್ನಲ್ಲಿ ಶಾಸಕರಾಗಿ ನಿವೃತ್ತಿ ಹೊಂದುವ ಪ್ರಾಮಾಣಿಕ ರಾಜಕಾರಣಿಗಳಿಗೆ ಎದುರಾಗುವ ಸಮಸ್ಯೆಯನ್ನು ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಸವಿಸ್ತಾರವಾಗಿ ವಿವರಿಸಿದರು. ವಿಧಾನಪರಿಷತ್ನಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಶಾಸಕರ ವೇತನ ವಿಚಾರ ಮಾತನಾಡಿದಾಗ, ವಿಶ್ವನಾಥ್ ಹಳೆಯ ಘಟನೆ ವಿವರಿಸಿದರು.
1978ರಲ್ಲಿ ನಮ್ಮ ಗೌರವಧನ 600 ರೂ. ಇತ್ತು. ಪ್ರತಿದಿನ ಹಾಜರಾಗಿ ಸಹಿ ಹಾಕಿದರೆ 50 ರೂ.ಕೊಡ್ತಿದ್ದರು. ನಾನು ಶಾಸಕನಾಗಿದ್ದಾಗ ಒಬ್ಬ ಹುಡುಗ ಕಾರು ತೊಳೀತಿದ್ದ. ಒಮ್ಮೆ ಹೊಡೆದುಬಿಟ್ಟೆ. ದಿನಕ್ಕೆ ಎರಡು ರೂ. ಕೇಳಿದ್ದಕ್ಕೆ ಹೊಡೆದಿದ್ದೆ. ಆತ ನಾನು ಮದುಗಿರಿಯಿಂದ ಎರಡು ಬಾರಿ ಶಾಸಕರಾಗಿದ್ದವರ ಮಗ. ನಮ್ಮ ಅಣ್ಣ ಇನ್ನೊಂದು ಕಡೆ ಕಾರು ತೊಳೆಯುತ್ತಾನೆ. ಇದರಿಂದ ಬರುವ ಹಣದಲ್ಲಿ ಬದುಕುತ್ತೇವೆ. ತಂದೆಯವರ ಪ್ರಾಮಾಣಿಕತೆ ನಮಗೆ ಈ ಸ್ಥಿತಿ ತಂದಿದೆ. ಪಿಂಚಣಿ ಬಂದರೆ ಬದುಕಬಹುದು ಎಂದು ಆ ಹುಡುಗ ಹೇಳಿದ್ದ. ಆಗ ನಾನು ಆತನಿಗೆ ಒಂದು ಕೆಲಸ ಕೊಡಿಸಲು ಸಾಕಷ್ಟು ಶ್ರಮಿಸಿದ್ದೆ. ಆಗ ನಮ್ಮಂತ ಜನಪ್ರತಿನಿಧಿಗೆ ಮುಂದೆ ಪಿಂಚಣಿಯ ಅಗತ್ಯ ಎಷ್ಟಿದೆ ಎಂಬ ಅರಿವಾಯಿತು ಎಂದರು.
ಗುಂಡೂರಾವ್ ಸಿಎಂ ಆದಾಗ 1,000 ರೂ. ಸಂಬಳ ಮಾಡಿದರು. ಪೆನ್ಶನ್ ನೀಡುವಂತೆ ಒತ್ತಡ ಹಾಕಿದ್ದೆವು. ರಾಜಕೀಯ ರಣೋತ್ಸಾಹದಲ್ಲಿ ಯಾರು ಗೆಲ್ಲುತ್ತೇವೋ ಸೋಲುತ್ತೇವೋ ಗೊತ್ತಿಲ್ಲ. ನಮ್ಮ ಪಿಂಚಣಿ ಹೆಚ್ಚಿಸಿದರೆ ಅನುಕೂಲ ಆಗುತ್ತದೆ ಎಂದು ಎಚ್. ವಿಶ್ವನಾಥ್ ಮನವಿ ಮಾಡಿದರು.