ಬೆಂಗಳೂರು: ರಾಷ್ಟ್ರೀಯ ಪಕ್ಷಗಳು ಮೇಕೆದಾಟು ವಿಷಯವನ್ನಿಟ್ಟುಕೊಂಡು ಚುನಾವಣಾ ಆಟ ಪ್ರಾರಂಭಿಸಿವೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್‍ನಲ್ಲಿ ಕಿಡಿಕಾರಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?: ಮೇಕೆದಾಟು ಯೋಜನೆ ವಿವಾದವನ್ನು ಕರ್ನಾಟಕ-ತಮಿಳುನಾಡು ಪರಸ್ಪರ ಚರ್ಚೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವಂತೆ ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ಅವರೇ ವಿವಾದ ಎನ್ನುವ ಮೂಲಕ ನಮ್ಮ ಜನರ ಕುಡಿಯುವ ನೀರಿನ ಯೋಜನೆಗೆ ಬಿಕ್ಕಟ್ಟಿನ ಲೇಪನ ಹಚ್ಚಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎರಡೂ ರಾಜ್ಯಗಳು ಕುಳಿತು ಚರ್ಚೆ ಮಾಡಿಕೊಂಡು ಒಮ್ಮತಕ್ಕೆ ಬರಬೇಕು ಎಂದು ಕೇಂದ್ರ ಸಚಿವರೇ ಹೇಳುವ ಮೂಲಕ, ಮೇಕೆದಾಟು ಯೋಜನೆಗೆ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅನುಮತಿ ನೀಡುವ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರ ನುಣುಚಿಕೊಳ್ಳುತ್ತಿದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಗುಡುಗಿದ್ದಾರೆ.