ದೇಶದಲ್ಲಿರುವ ಅಮೂಲ್ಯ ಲೋಹ ನಿಕ್ಷೇಪ ಶೋಧನೆಗೆ ಕೇಂದ್ರ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಸೌತ್ ಜುವೆಲರಿ ಶೋ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಸುಮಾರು 900 ಟನ್‌ಗಳಷ್ಟು ಬಂಗಾರದ ಲೋಹದ ನಿಕ್ಷೇಪ ಇದೆ ಎಂದು ಅಂದಾಜಿಸಲಾಗಿದ್ದು, ಕಾಪರ್, ಅಲ್ಯೂಮಿನಿಯಂನ ನಿಕ್ಷೇಪಗಳ ಶೋಧನೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿ ಗುರುತಿಸಲಾಗಿರುವ ಬಂಗಾರದ ನಿಕ್ಷೇಪಗಳ ಹರಾಜಿಗೆ ಈಗಾಗಲೇ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಪ್ರಕ್ರಿಯೆಯ ಅನಂತರ ಉತ್ತಮ ಗುಣಮಟ್ಟದ ಬಂಗಾರ ಹೊರತಗೆಯುವ ಭರವಸೆ ಇದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಸುಮಾರು 900 ಟನ್‌ಗಳಷ್ಟು ಬಂಗಾರದ ನಿಕ್ಷೇಪ ಇರುವ ಬಗ್ಗೆ ಅಂದಾಜಿಸಲಾಗಿದ್ದು, ಅದನ್ನು ಭೂಗರ್ಭದಿಂದ ತಗೆದು ಮಾರುಕಟ್ಟೆಗೆ ತರುವ ಪ್ರಯತ್ನ ಸಾಗಿದೆ. ಇದೇ ರೀತಿ ನಮ್ಮ ಹತ್ತಿರ ಬಹಳ ತಾಮ್ರದ ನಿಕ್ಷೇಪಗಳೂ ಇದ್ದು, ಅವುಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಅವರು ಉಪಸ್ಥಿತರಿದ್ದರು.