ಬೆಂಗಳೂರು, ಮಾರ್ಚ್ 4: ಉಕ್ರೇನ್‌ನಲ್ಲಿ ಹತ್ಯೆಗೀಡಾದ ವಿದ್ಯಾರ್ಥಿ ನವೀನ್ ಶೇಖರಗೌಡ ಅವರ ಶವವನ್ನು ಕರ್ನಾಟಕಕ್ಕೆ ತರಲು ಅವರ ಕುಟುಂಬ ಕಾಯುತ್ತಿರುವಾಗ, ಬಿಜೆಪಿ ಶಾಸಕರೊಬ್ಬರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. “ವಿಮಾನದಲ್ಲಿ ನವೀನ್ ಮೃತದೇಹ ತರಲು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ” ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದ್ದಾರೆ.
ಹುಬ್ಬಳ್ಳಿ-ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ನವೀನ್ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಹಾವೇರಿಗೆ ಯಾವಾಗ ತರಲಾಗುವುದು ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಶವಪೆಟ್ಟಿಗೆಯ ಬದಲಿಗೆ ಸುಮಾರು ಎಂಟರಿಂದ 10 ಜನರಿಗೆ ವಿಮಾನದಲ್ಲಿ ಸ್ಥಳಾವಕಾಶವಾಗುತ್ತದೆ’ ಎಂದು ಉತ್ತರಿಸಿದ್ದಾರೆ.
“ನವೀನ್ ಅವರ ಪಾರ್ಥಿವ ಶರೀರವನ್ನು ಮರಳಿ ತರಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಉಕ್ರೇನ್ ಯುದ್ಧ ವಲಯವಾಗಿದೆ ಮತ್ತು ಅದು ಎಲ್ಲರಿಗೂ ತಿಳಿದಿದೆ. ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಸಾಧ್ಯವಾದರೆ ದೇಹವನ್ನು ಮರಳಿ ತರಲಾಗುವುದು” ಎಂದು ಬೆಲ್ಲದ್ ಸುದ್ದಿಗಾರರಿಗೆ ತಿಳಿಸಿದರು.
“ಜೀವಂತವಾಗಿರುವವರನ್ನು ಮರಳಿ ಕರೆತರುವುದು ತುಂಬಾ ಸವಾಲಿನದ್ದಾಗಿದೆ. ಹೀಗಿರುವಾ ಮೃತ ದೇಹವು ವಿಮಾನದಲ್ಲಿ ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ ಎಂಬ ಕಾರಣದಿಂದ ಸತ್ತವರನ್ನು ಮರಳಿ ತರುವುದು ಹೆಚ್ಚು ಕಷ್ಟಕರವಾಗಿದೆ. ಮೃತದೇಹದ ಬದಲಿಗೆ ಎಂಟರಿಂದ 10 ಜನರಿಗೆ ಸ್ಥಳಾವಕಾಶ ನೀಡಿದಂತಾಗುತ್ತದೆ. ಮೃತ ದೇಹವು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ” ಎಂದು ಬಿಜೆಪಿ ಶಾಸಕ ಬೆಲ್ಲದ್ ಹೇಳಿದ್ದಾರೆ.