ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ಎಎಸ್‍ಐ ಆಗಿ ಸೇವೆಯಿಂದ ನಿವೃತ್ತಿಯಾದ ನಂದಕುಮಾರ್ ಅಂಚಿ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಹೌದು ಎಎಸ್‍ಐ ನಂದಕುಮಾರ್ ಅಂಚಿ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಬೆಳಗಾವಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಅನೇಕ ವರ್ಷಗಳಿಂದ ಮಾರ್ಕೆಟ್ ಠಾಣೆಯಲ್ಲಿ ಎಎಸ್‍ಐ ಆಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ವಿಶೇಷ ಘಟಕದಲ್ಲಿ ಕೆಲಸ ಮಾಡುತ್ತಾ ಸದಾ ಹಸನ್ಮುಖಿಯಾಗಿ ಜನರ ಸಮಸ್ಯೆಗಳಿಗೆ ಸ್ವತಃ ಧ್ವನಿಯಾಗಿ ಕೆಲಸ ಮಾಡಿದ್ದ ದಕ್ಷ, ಪ್ರಾಮಾಣಿಕ, ಜನಸ್ನೇಹಿ ಪೊಲೀಸ್ ಅಧಿಕಾರಿ ನಂದಕುಮಾರ್ ಅಂಚಿ ಅವರು ಇದೀಗ ನಿವೃತ್ತಿಯಾಗಿದ್ದಾರೆ. ಹೀಗಾಗಿ ಸೋಮವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿಎಆರ್ ಎಸ್‍ಪಿ ಸಿದ್ದನಗೌಡ ಪಾಟೀಲ್ ಅವರು ನಂದಕುಮಾರ್ ಅಂಚಿ ಅವರಿಗೆ ಹೂಗುಚ್ಛ ನೀಡಿ ಸತ್ಕರಿಸಿದರು. ಬಳಿಕ ಹಲವು ಪೊಲೀಸ್ ಅಧಿಕಾರಿಗಳು ಸತ್ಕರಿಸಿ ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ನಂದಕುಮಾರ್ ಅಂಚಿ ಅವರಿಗೆ ಶುಭ ಹಾರೈಸಿದರು.