ಬೆಂಗಳೂರು: ಚಿತ್ರಾಭಿಮಾನ, ಅಭಿಮಾನಿಗಳ ಜೈಕಾರ, ರಾಜಕೀಯ ಮೇಳ, ಬೇಡಿಕೆಗಳ ಪಟ್ಟಿ ಮತ್ತು ಭರವಸೆಗಳ ಮಹಾಪೂರಗಳ ನಡುವೆ 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ಚಾಲನೆ ಸಿಕ್ಕಿತು.
ಕೃಷಿ ವಿಶ್ವವಿದ್ಯಾಲಯದ ಡಾ.ಬಾಬು ರಾಜೇಂದ್ರ ಪ್ರಸಾದ್ ಸಮ್ಮೇಳನ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸುಮಾರು ಒಂದು ಗಂಟೆಯಷ್ಟು ತಡವಾಗಿ ಆರಂಭವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಷಣ ಆರಂಭಿಸಿದ ಕೆಲ ಕ್ಷಣಗಳಲ್ಲಿ ನಟ ದರ್ಶನ್ ಬಂದರು
ಆ ವೇಳೆಗೆ ಸಭಾಂಗಣದಲ್ಲಿದ್ದ ಅಭಿಮಾನಿಗಳೆಲ್ಲಾ ‘ಡಿ ಬಾಸ್… ಡಿ ಬಾಸ್…’ ಎಂದು ಜೈಕಾರ ಹಾಕಲಾರಂಭಿಸಿದರು. ದರ್ಶನ್ ವೇದಿಕೆಯಲ್ಲಿ ಕುಳಿತರೂ ಕೂಗು ಕಡಿಮೆಯಾಗಲಿಲ್ಲ. ಪೆಚ್ಚಾದ ಮುಖ್ಯಮಂತ್ರಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ತಮ್ಮ ಆಸನದಲ್ಲಿ ಕುಳಿತರು.
ಬಳಿಕ, ಮೈಕ್ ಬಳಿ ತೆರಳಿದ ದರ್ಶನ್, ‘ಕರ್ನಾಟಕದ ಮುಖ್ಯಮಂತ್ರಿ ನಮ್ಮೆಲ್ಲರಿಗಿಂತ ದೊಡ್ಡವರು. ಅವರು ಮಾತನಾಡುವಾಗ ಮರ್ಯಾದೆ ಕೊಡಬೇಕು. ಎಲ್ಲರೂ ಸುಮ್ಮನಿರಬೇಕು’ ಎಂದು ಅಭಿಮಾನಿಗಳಿಗೆ ಸೂಚಿಸಿದರು. ಆ ಬಳಿಕ ಮುಖ್ಯಮಂತ್ರಿ ಮಾತು ಮುಂದುವರಿಸಿದರು.
‘ದರ್ಶನ್ ನಮ್ಮ ಹುಡುಗ. ನಿಮಗಿಂತ ನನಗೆ ಆತನ ಬಗ್ಗೆ ಚೆನ್ನಾಗಿ ಗೊತ್ತು. ಅವನಿಗಿರುವ ವನ್ಯಜೀವಿಗಳ ಮೇಲಿನ ಕಾಳಜಿ, ಅವನ
ವನ್ಯಜೀವಿ ಛಾಯಾಗ್ರಹಣ ನನಗೆ ತುಂಬಾ ಇಷ್ಟ’ ಎಂದು ಮುಖ್ಯಮಂತ್ರಿ ಹೇಳಿದರು.