ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೊಲ್ಲಲು ಆಗಮಿಸಿದ್ದ ಚೆಚೆನ್ಯಾ ಮೂಲದ ಹಂತಕರ ಗುಂಪೊಂದನ್ನು ಸಂಪೂರ್ಣವಾಗಿ ನಾಶ ಮಾಡಿರುವುದಾಗಿ ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣ ಕೌನ್ಸಿಲ್‌ನ ಮುಖ್ಯಸ್ಥರಾದ ಒಲೆಕ್ಸಿಯ್ ಡ್ಯನಿಲೊವ್ ತಿಳಿಸಿದ್ದಾರೆ.
ಉಕ್ರೇನ್‌ನ ರಾಷ್ಟ್ರೀಯ ಟೆಲಿವಿಶನ್ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ರಷ್ಯಾ ಗುಪ್ತಚರ ಇಲಾಖೆಯಲ್ಲಿರುವ, ಯುದ್ಧ ಮಾಡುವ ಮನಸ್ಸಿಲ್ಲದ ಅಧಿಕಾರಿಗಳು ಉಕ್ರೇನ್‌ನ ಅಧಿಕಾರಿಗಳಿಗೆ ಚೆಚೆನ್ಯಾದಿಂದ ಬಂದಿದ್ದ ಈ ಹಂತಕರ ಗುಂಪಿನ ಬಗ್ಗೆ ಮಾಹಿತಿ ನೀಡಿದ್ದರು. ಅವರು ನೀಡಿದ ಮಾಹಿತಿಯನ್ನಾಧರಿಸಿ ಹಂತಕರ ಗುಂಪನ್ನು ನಾಶಗೈದಿರುವುದಾಗಿ ಒಲೆಕ್ಸಿಯ್ ತಿಳಿಸಿದ್ದಾರೆ.