ಬೆಳಗಾವಿ: ಪೀರನವಾಡಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಬೆನ್ನಲ್ಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಧ್ವಜ ಹಿಡಿದು ಸಾಗುತ್ತಿದ್ದ ರಾಯಣ್ಣ ಅಭಿಮಾನಿಗಳ ಮೇಲೆ ಎಂಇಎಸ್ ಯುವಕರು ಚಪ್ಪಲಿ ಎಸೆದ ಘಟನೆ ನಡೆದಿದೆ.
ಪೀರನವಾಡಿಯಲ್ಲಿ ಶಿವಾಜಿ ಪ್ರತಿಮೆ ಎದುರೇ ಬೆಳಗಾಗುವಷ್ಟರಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಸ್ಥಳೀಯ ಮಾರಾಠಿಗರು ಹಾಗೂ ಕನ್ನಡಿಗರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದಂತೆಯೇ ಸ್ಥಳದಲ್ಲಿ ಜಮಾವಣೆಗೊಂಡಿದ್ದ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ವಾಪಸ್ ಕಳುಹಿಸುತ್ತಿದ್ದಾರೆ.
ಈ ಮಧ್ಯೆ ಧ್ವಜ ಹಿಡಿದು ಬೈಕ್ ನಲ್ಲಿ ಹೋಗುತ್ತಿದ್ದ ರಾಯಣ್ಣ ಅಭಿಮಾನಿಗಳ ಮೇಲೆ ಎಂಇಎಸ್ ಯುವಕರು ಚಪ್ಪಲಿ ಎಸೆದಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ತಕ್ಷಣ ಪೊಲೀಸರು ಕಿಡಿಗೇಡಿಗಳ ಮೇಲೆ ಲಾಠಿ ಬೀಸಿ, ಜನರನ್ನು ಚದುರಿಸಿದ್ದಾರೆ.