ಬೆಳಗಾವಿ-ಶಾಸಕ ಅಭಯ ಪಾಟೀಲ ಪರಿಶ್ರಮದ ಫಲದಿಂದ ಬಜೆಟ್ ನಲ್ಲಿ ಬೆಳಗಾವಿಗೆ ಬಂಪರ್ ಸಿಗುವ ನಿರೀಕ್ಷೆ
ಬೆಳಗಾವಿ: ಅಭಿವೃದ್ಧಿ ಕೆಲಸಗಳ ಮೂಲಕ ಮಿಸ್ಟರ್ ಡೆವಲೆಫ್ ಮೆಂಟ್ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ರಾಜ್ಯ ಬಜೆಟ್ ನಲ್ಲಿ ಕುಂದಾನಗರಿ ಜನತೆಗೆ ಬಂಪರ್ ಕೊಡುಗೆ ಕೊಡಿಸಲು ವೇದಿಕೆ ಸಿದ್ಧಗೊಳಿಸಿದ್ದಾರೆ.
ಅವರ ಪರಿಶ್ರಮದ ಫಲವಾಗಿ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಬೆಳಗಾವಿಗರಿಗೆ ವಿಶೇಷ ಕೊಡುಗೆ ಸಿಗುವ ನಿರೀಕ್ಷೆ ಗರಿಗೆದರಿದೆ.
ರಾಜ್ಯದಲ್ಲಿಯೇ ಪ್ರಪ್ರಥಮ ಕೇಬಲ್ ಕಾರು
ಐತಿಹಾಸಿಕ ರಾಜಹಂಸಗಡ ಕೋಟೆಯನ್ನು ಪ್ರವಾಸಿ ತಾಣವಾಗಿ ಮಾಡಬೇಕೆಂಬುದು ಶಾಸಕ ಅಭಯ ಪಾಟೀಲರ ಕನಸಾಗಿದ್ದು, ರಾಜ್ಯದಲ್ಲಿಯೇ ಪ್ರಪ್ರಥಮ ಕೇಬಲ್ ಕಾರು ಯೋಜನೆ ಸಾಕಾರಗೊಳ್ಳುವ ಆಶಾಭಾವನೆ ಮೂಡಿದೆ 50 ಕೋಟಿ ರೂ. ಯೋಜನೆಯ ಬ್ಲೂ ಪ್ರಿಂಟ್ ಸಿದ್ದವಾಗಿದ್ದು, ಈಗಾಗಲೇ ಪ್ರವಾಸೋಧ್ಯಮ ಇಲಾಖೆಯ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಯೋಜನೆ ಅನುಷ್ಠಾನದ ಸಾಧ್ಯಾ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ಯೋಜನೆ ಜಾರಿಗೊಳಿಸಬಹುದು ಎಂದು ಇಲಾಖೆಗೆ ವರದಿ ಕೊಟ್ಟಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲರು ಸಿಎಂ, ಪ್ರವಾಸೋದ್ಯಮ ಇಲಾಖೆ ಸಚಿವರ ಬೆನ್ನುಬಿದ್ದು ಯೋಜನೆ ಅನುಷ್ಠಾನಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ. ಈಗಿನ ಬಜೆಟ್ ನಲ್ಲಿ ಯೋಜನೆಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.
ಯೋಜನೆ ಸಾಕಾರಗೊಂಡರೆ ಯಳ್ಳೂರು ಕೆರೆಯಿಂದ ರಾಜಹಂಸಗಡಕ್ಕೆ 3.8 ಕಿಮೀ ಕೇಬಲ್ ಕಾರು ಓಡಾಡಲಿದೆ. ಐತಿಹಾಸ ಪ್ರಸಿದ್ಧ ರಾಜಹಂಸಗಡ ಕೋಟೆ ವೀಕ್ಷಣೆಗೆ ಬರಲಿರುವ ಪ್ರವಾಸಿಗರು ಕೇಬಲ್ ಕಾರು ಮೂಲಕ ನಿಸರ್ಗ ಸೌಂದರ್ಯ ಸವಿಯುವ ಅವಕಾಶ ಸಿಗಲಿದೆ.