ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಶಾಸಕ ಎಚ್.ಡಿ.ರೇವಣ್ಣ ಅವರ ಕುಟುಂಬಕ್ಕೆ ಶಾಸಕ ಪ್ರೀತಂ ಗೌಡ ಅವರು ಪಂಥಾಹ್ವಾನ ನೀಡಿದ್ದಾರೆ.
‘ಅಭಿವೃದ್ಧಿ, ಬೇರೆ ವಿಚಾರದಲ್ಲಿ ನಮ್ಮ ನಡುವೆ ಮಾತಿನ ಸಂಘರ್ಷ ನಡೆಯುತ್ತಿರುತ್ತೆ.
ಹಾಸನ ಜನರಿಗೆ ಪ್ರೀತಂ ಗೌಡರ ಯೋಚನೆ, ಯೋಜನೆ ಒಪ್ಪಿದೆಯೋ, ಇಲ್ಲವೇ ರೇವಣ್ಣ ಅವರ ಅಭಿವೃದ್ಧಿ ಶೈಲಿ ಇಷ್ಟವಾಗಿದೆಯೋ ಎಂಬ ಬಗ್ಗೆ ಒಂದು ಸ್ಪರ್ಧೆ ನಡೆದೇ ಬಿಡಲಿ’ ಎಂದು ನಗರದಲ್ಲಿ ಶನಿವಾರ ಸವಾಲು ಹಾಕಿದರು.
‘ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಅವರು ಬಂದು ಸ್ಪರ್ಧೆ ಮಾಡಲಿ. ಅವರ ಆಲೋಚನೆ ಸರಿ ಎಂದರೆ ಜನರು ಅವರಿಗೆ ಮತ ಹಾಕುತ್ತಾರೆ, ಪ್ರೀತಂ ಗೌಡನ ಅಭಿವೃದ್ಧಿ ಕಾರ್ಯ ಇಷ್ಟವಾದರೆ ನನಗೆ ಮತ ಹಾಕುತ್ತಾರೆ. ಪ್ರೀತಂಗೌಡ ಗೆಲ್ಲಬೇಕೋ, ರೇವಣ್ಣ ಗೆಲ್ಲಬೇಕೋ ತೀರ್ಮಾನವಾಗಲಿ’ ಎಂದು ಬಹಿರಂಗ ಆಹ್ವಾನ ನೀಡಿದರು.
‘ಒಬ್ಬ ಮಗ ವಿಧಾನ ಪರಿಷತ್ ಸದಸ್ಯ, ಒಬ್ಬ ಮಗ ಸಂಸದ, ಇವರು ಹೊಳೆನರಸೀಪುರ ಶಾಸಕ. ಅವರ ಕುಟುಂಬದವರೇ ಮುಂದಿನ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಾರೆ ಎಂಬ ಮಾಹಿತಿ ಇದೆ. ನಾನು ಖಂಡಿತವಾಗಿಯೂ ಅವರನ್ನು ಸ್ವಾಗತ ಮಾಡುತ್ತೇನೆ. ರೇವಣ್ಣ ಅವರು ಬಂದರೂ ಸಂತೋಷ, ಭವಾನಿ ಅಕ್ಕ ಬಂದರೂ ಸಂತೋಷ. ಭವಾನಿ ಅಕ್ಕ ಅಭ್ಯರ್ಥಿ ಎನ್ನುವುದಾದರೆ ನಾಳೆಯೇ ಘೋಷಣೆ ಮಾಡಲಿ. ಚುನಾವಣೆ ಎದುರಿಸಲು ಸಿದ್ಧ’ ಎಂದು ಸ್ಪಷ್ಟಪಡಿಸಿದರು.
Laxmi News 24×7