ಬೆಂಗಳೂರು, ಜನವರಿ 18: ಅಪ್ರತಿಮ ದೇಶ ಭಕ್ತ, ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಸಾಧನೆ ಸ್ಮರಣೀಯ ಹಾಗೂ ಯುವ ಜನರಿಗೆ ಪ್ರೇರಣೆಯಾಗಿದೆ. ಹೀಗಾಗಿ ಸುಭಾಷ ಚಂದ್ರ ಬೋಸ್‌ರವರ 125ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಬೆಂಗಳೂರಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ (ಜನವರಿ 23) ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಮೂಲಕ ನಡೆಸಿದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಬೆಂಗಳೂರಿನ ಜಕ್ಕೂರಿನ ವೈಮಾನಿಕ ತರಬೇತಿ ಶಾಲೆಯ ಆವರಣದಲ್ಲಿ ಸುಭಾಷ್ ಚಂದ್ರ ಬೋಸ್‌ರವರ 125ನೇ ಜನ್ಮ ದಿನಾಚರಣೆಯನ್ನು ಮಾಡಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನೂರು ಜನ ಎನ್‌ಸಿಸಿ ಕೆಡಿಟ್ ಮತ್ತು ಕಮಾಂಡರ್‌ಗಳು ಭಾಗಿಯಾಗಲಿದ್ದಾರೆ ಎಂದರು.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಇದು ಸುಭಾಷ್ ಚಂದ್ರ ಬೋಸ್‌ರವರ 125ನೇ ಜನ್ಮ ದಿನ. ಹೀಗಾಗಿ ರಾಜ್ಯದ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ವರ್ಷವಿಡೀ ಸುಭಾಷ್ ಚಂದ್ರ ಬೋಸ್ ಅವರ ಕುರಿತಾದ ಕಾರ್ಯಕ್ರಮಗಳನ್ನು ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ವಿಶೇಷವಾದ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜನವರಿ 23ರಿಂದ ಗಣರಾಜ್ಯೋತ್ಸವ ಪ್ರಾರಂಭ
ಇನ್ಮುಂದೆ ಪ್ರತಿ ಬಾರಿಯ ಗಣರಾಜ್ಯೋತ್ಸವವು ಜನವರಿ 24ರ ಬದಲಿಗೆ ಜನವರಿ 23ರಿಂದ ಪ್ರಾರಂಭವಾಗಲಿದೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಒಳಗೊಂಡಿರುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.