ಬೆಂಗಳೂರು, ಜ.15- ನಂದಿನಿ ಉತ್ಪನ್ನಗಳ ಮಾರಾಟವನ್ನು ದೇಶಾದ್ಯಂತ ವಿಸ್ತರಿಸಲು ಬೆಳಗಾವಿಯಲ್ಲಿ ನಂದಿನಿ ಮೆಗಾ ಫುಡ್ ಪಾರ್ಕ್ ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಪನ್ನೀರ್ ಹಾಗೂ ಚೀಸ್ ಆಧಾರಿದ ಉತ್ಪನ್ನಗಳು ಮತ್ತು ಇತರೆ ನಂದಿನಿ ಸಿಹಿ ಉತ್ಪನ್ನಗಳನ್ನು ಈ ಘಟಕದ ಮೂಲಕ ಉತ್ಪಾದಿಸಿ ಮಾರುಕಟ್ಟೆ ಜಾಲವನ್ನು ವಿಸ್ತರಿಸಲಾಗುವುದು ಎಂದರು.ಕೆಎಂಎಫ್ 2020-21ನೆ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮೆಗಾ ಫುಡ್‍ಪಾರ್ಕ್ ಮೂಲಕ ನೆರೆಯ ಗೋವಾ ಹಾಗೂ ಮಹಾರಾಷ್ಟ ರಾಜ್ಯಗಳಲ್ಲಿ ನಮ್ಮ ನಂದಿನಿ ಉತ್ಪನ್ನಗಳ ಮಾರಾಟವು ವಿಸ್ತರಣೆಯಾಗಲಿದೆ ಎಂದು ಹೇಳಿದರು. ಹಾಸನ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ನೂತನ ಪೆಟ್ ಬಾಟಲ್ ಘಟಕವನ್ನು ಅಳವಡಿಸಿದ್ದು, ಈ ಸ್ಥಾವರ ವಿವಿಧ ಮಾದರಿಯ ಸುಹಾಸಿತ ಹಾಲು, ಲಸ್ಸಿ, ಯೋಗಲ್ಟ್ ಇತ್ಯಾದಿಯಾಗಿ ಸುಮಾರು 15 ಹೊಸ ಉತ್ಪನ್ನಗಳ ಉತ್ಪಾದನೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈ ಘಟಕದಲ್ಲಿ ಪ್ರತಿನಿತ್ಯ 5 ಲಕ್ಷ ಪೆಟ್ ಬಾಟಲ್ ಉತ್ಪಾದನೆಯಾಗುತ್ತಿದ್ದು, ಇದನ್ನು ದೇಶದೆಲ್ಲೆಡೆ ಮಾರಾಟ ಮಾಡಿ ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರವು ರಾಜ್ಯದಲ್ಲಿ ಅತೀ ಕಡಿಮೆ ದರವನ್ನು ಹೊಂದಿದೆ. 37 ರೂ.ಗಳಂತೆ ಪ್ರತಿ ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಲಿನ ದರದಲ್ಲಿ ಪ್ರತಿ ಲೀಟರ್‍ಗೆ 3 ರೂ.ಗಳಂತೆ ಏರಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.