ರಾಮನಗರ: ಮೇಕೆದಾಟು ಯೋಜನೆಯನ್ನು ಜಾರಿ ಮಾಡುವ ಗಂಡಸುತನ ಇರೋದು ಬಿಜೆಪಿಗೆ ಮಾತ್ರ; ಕಾಂಗ್ರೆಸ್ ಪಕ್ಷಕ್ಕೆ ಇದನ್ನೆಲ್ಲ ಅನುಷ್ಠಾನಗೊಳಿಸುವ ಶಕ್ತಿಯೇ ಇಲ್ಲ. ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಗೆ ಈ ಪೌರುಷವಿದೆಯಾ?
ಈ ವಿಚಾರದಲ್ಲಿ ನಾನು ನೇರವಾಗಿ ಅವರಿಬ್ಬರಿಗೂ ಸವಾಲೆಸೆಯುತ್ತಿದ್ದೇನೆ. ತಾಕತ್ತಿದ್ದರೆ ಅವರು ಉತ್ತರಿಸಲಿ’ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪಂಥಾಹ್ವಾನ ನೀಡಿದ್ದಾರೆ.
`ಡಿ.ಕೆ.ಶಿವಕುಮಾರ್ ಜಿಲ್ಲೆಯಿಂದ ಏಳು ಬಾರಿ ಶಾಸಕರಾಗಿ, ಹಲವು ಬಾರಿ ಮಂತ್ರಿಗಳಾಗಿದ್ದಾರೆ; ಇವರ ಸಹೋದರ ಎರಡು ಬಾರಿ ಸಂಸದರಾಗಿದ್ದಾರೆ. ಆದರೆ ಇಷ್ಟು ವರ್ಷಗಳಲ್ಲಿ ಜಿಲ್ಲೆಗೆ ಇವರ ಕೊಡುಗೆ ಏನು? ಜಿಲ್ಲೆಯಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ, ಸಂಪನ್ಮೂಲವನ್ನು ಲೂಟಿ ಹೊಡೆದಿರುವುದನ್ನು ಬಿಟ್ಟರೆ ಇವರೇನು ಕಡಿದು ಕಟ್ಟೆ ಹಾಕಿದ್ದಾರೆ?’ ಎಂದು ತೀಕ್ಷ್ಣ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷವು ಸಾಂಕ್ರಾಮಿಕ ರೋಗ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಗಳನ್ನು ಉಲ್ಲಂಘಿಸಿ ಪಾದಯಾತ್ರೆ ನಡೆಸುತ್ತಿದೆ. ಇವೆರಡೂ ಜಾಮೀನುರಹಿತ ಅಪರಾಧಗಳಾಗಿವೆ. ಸರಕಾರವು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ನಿಗಾ ಇಟ್ಟಿದೆ. ಪರಿಸ್ಥಿತಿ ಬಿಗಡಾಯಿಸಿದರೆ ಕಠಿಣ ಕ್ರಮವನ್ನ ತೆಗೆದುಕೊಳ್ಳಬಹುದು ಎಂದು ಅವರು ಎಚ್ಚರಿಕೆ ರವಾನಿಸಿದರು.
ಜನಪ್ರತಿನಿಧಿಗಳಾದವರಿಗೆ ಜನರ ಕೆಲಸ ಮಾಡಲು ಸಮಯ ಸಾಕಾಗುವುದಿಲ್ಲ. ಆದರೆ ಏಳು ಬಾರಿ ಶಾಸಕರಾಗಿ ಗೆದ್ದು ಬಂದ ಡಿ.ಕೆ.ಶಿವಕುಮಾರ್ ಜಿಲ್ಲೆಯ ಅಭಿವೃದ್ಧಿ ಮಾಡುವುದನ್ನು ಬಿಟ್ಟು ತಾವೇ ವ್ಯಾಪಾರ-ವಹಿವಾಟು ನಡೆಸಿಕೊಂಡು ಕೂತಿದ್ದರು. ಒಬ್ಬ ಶಾಸಕನಿಗೆ ಬಿಜಿನೆಸ್ ಮಾಡಲು ಸಮಯ ಎಲ್ಲಿರುತ್ತದೆ ಹೇಳಿ? ಜನರ ನಂಬಿಕೆ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವು ನೈತಿಕವಾಗಿ ದಿವಾಳಿ ಎದ್ದು ಹೋಗಿರುವ ದಾರಿದ್ರ್ಯದಲ್ಲಿದೆ ಎಂದು ಅಶ್ವತ್ಥನಾರಾಯಣ ಹರಿಹಾಯ್ದರು.