ಬೆಂಗಳೂರು: ಮೇಕೆದಾಟು ಯೋಜನೆಗೆ ಅತ್ತ ತಮಿಳುನಾಡು ಸರ್ಕಾರ ತಕರಾರು ತೆಗೆಯುತ್ತಲೇ ಇದ್ದರೆ, ಇತ್ತ ಕಾವೇರಿಯಿಂದ ತಮಿಳುನಾಡಿಗೆ ಬಿಡಬೇಕಾದ ನೀರು ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹರಿದು ಹೋಗಿದೆ.
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ, ಸಾಮಾನ್ಯ ಜಲವರ್ಷದಲ್ಲಿ ತಮಿಳುನಾಡಿಗೆ 2018-19ನೇ ಸಾಲಿನಿಂದ 177.25 ಟಿಎಂಸಿ ಅಡಿ ನೀರು ಬಿಡಬೇಕಿದೆ. ಆದರೆ, ಪ್ರಸಕ್ತ ವರ್ಷವೂ ಸೇರಿ ಕಳೆದ ನಾಲ್ಕು ವರ್ಷಗಳಲ್ಲಿ ಈ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿದು ಹೋಗಿದೆ.
ಕಾವೇರಿ ನ್ಯಾಯ ಮಂಡಳಿಯ 2007ರ ಫೆ. 5ರ ಅಂತಿಮ ತೀರ್ಪಿನ ಅನ್ವಯ ಸಾಮಾನ್ಯ ಜಲವರ್ಷದಲ್ಲಿ ಕಾವೇರಿಯಿಂದ ತಮಿಳುನಾಡಿಗೆ 192 ಟಿಎಂಸಿ ಅಡಿ ಹರಿಸಬೇಕಿತ್ತು. ಈ ನೀರಿನ ಪ್ರಮಾಣದ ಹಂಚಿಕೆಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ಮೇಲೆ ಸುಪ್ರೀಂ ಕೋರ್ಟ್ 2018ರ ಫೆ. 16ರಂದು ನೀಡಿದ ತೀರ್ಪಿನಲ್ಲಿ 177.25 ಟಿಎಂಸಿ ಅಡಿಗೆ ಇಳಿಸಿತ್ತು.
ಜಲವರ್ಷ 2011-12ರಿಂದ 2017-18ರವರೆಗಿನ ಅವಧಿಯಲ್ಲಿ 2012-13 ಮತ್ತು 2015ರಿಂದ 2018ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ತಮಿಳುನಾಡಿಗೆ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿತ್ತು. ಇದು ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಜಲ ಸಂಘರ್ಷಕ್ಕೆ ಕಾರಣವಾಗಿತ್ತು.