ಅಹಮದಾಬಾದ್: ಹೈಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳಲ್ಲಿಯೂ ಆಯಾ ರಾಜ್ಯಗಳ ಭಾಷೆಗಳನ್ನೇ ಕಡ್ಡಾಯ ಮಾಡಬೇಕು ಎಂದು ಕೆಲ ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ. ಅಧೀನ ಕೋರ್ಟ್‌ಗಳಲ್ಲಿ ಈ ನಿಯಮ ಪಾಲನೆ ಮಾಡುತ್ತಿದ್ದಾರೆಯಾದರೂ ಹೈಕೋರ್ಟ್‌ಗಳಲ್ಲಿ ಇದು ಕಷ್ಟ.
ಇದಕ್ಕೆ ಕಾರಣ, ಬೇರೆ ಬೇರೆ ರಾಜ್ಯಗಳಿಂದ ಸ್ಥಳೀಯ ನ್ಯಾಯಮೂರ್ತಿಗಳು ನೇಮಕಗೊಳ್ಳುವ ಕಾರಣದಿಂದಾಗಿ ಹೈಕೋರ್ಟ್, ಸುಪ್ರೀಂಕೋರ್ಟ್‌ಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಇಂಗ್ಲಿಷ್ ಬಳಕೆ ಮಾಡಲಾಗುತ್ತಿದೆ. ಅಪರೂಪ ಪ್ರಕರಣಗಳಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಅದೇ ರಾಜ್ಯದವರಾಗಿದ್ದು, ಅಲ್ಲಿಯ ಭಾಷೆ ಬರುತ್ತಿದ್ದರೆ ಸ್ಥಳೀಯ ಭಾಷೆಗಳನ್ನು ವಿಚಾರಣೆ ವೇಳೆ ಬಳಸುವುದುಂಟು.
ಇಂಥ ಸ್ಥಿತಿಯ ನಡುವೆ ಗುಜರಾತ್ ಮುಖ್ಯ ನ್ಯಾಯಮೂರ್ತಿಗಳು ಕನ್ನಡ ಭಾಷೆ ಬಳಸಿದ್ದು ಇದೀಗ ಭಾರಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಇಷ್ಟೇ. ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಕರ್ನಾಟಕದವರೇ ಆಗಿರುವ ಅರವಿಂದ ಕುಮಾರ್ ಅವರು.
ಕೇಸೊಂದರ ವಿಚಾರಣೆ ವೇಳೆ ಕಕ್ಷಿದಾರನೊಬ್ಬರು ಖುದ್ದು ವಾದ ಮಂಡಿಸುತ್ತಿದ್ದರು. ಆ ಸಂದರ್ಭದಲ್ಲಿ ಆತ ಗುಜರಾತಿ ಭಾಷೆಯನ್ನು ಆಡಲು ಶುರು ಮಾಡಿದ್ದಾರೆ. ಅದರಿಂದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು, ‘ನನಗೆ ಗುಜರಾತಿ ಭಾಷೆ ಅರ್ಥವಾಗುವುದಿಲ್ಲ. ಹೈಕೋರ್ಟ್ ನಿಯಮದಂತೆ ಇಂಗ್ಲಿಷ್‌ನಲ್ಲಿ ವಾದ ಮಂಡಿಸಿ’ ಎಂದಿದ್ದಾರೆ. ಆಗ ಕಕ್ಷಿದಾರ ‘ಇದು ಗುಜರಾತ್. ಇದೇ ಮೊದಲ ಬಾರಿಗೆ ನಾನು ಹೈಕೋರ್ಟ್ಗೆ ಬಂದಿರುವೆ, ಗುಜರಾತಿ ಭಾಷೆಯಲ್ಲಿಯೇ ವಾದ ಮಂಡಿಸುವೆ’ ಎಂದರು.
ಈ ಮಾತಿನಿಂದ ಬೇಸರಗೊಂಡ ನ್ಯಾಯಮೂರ್ತಿ ಅರವಿಂದ ಕುಮಾರ್, ‘ಸರಿ ಹಾಗಿದ್ದರೆ, ನಾನು ಕರ್ನಾಟಕದವ. ನಾನು ಕನ್ನಡದಲ್ಲಿ ಮಾತನಾಡುತ್ತೇನೆ. ನೀವು ಮಾತು ಮುಂದುವರೆಸಿ’ ಎಂದು ಕನ್ನಡದಲ್ಲಿಯೇ ಹೇಳಿದರು. ಆಗ ಕಕ್ಷಿದಾರ ಕಕ್ಕಾಬಿಕ್ಕಿಯಾಗಿ ‘ನನಗೆ ಕನ್ನಡ ಬರುವುದಿಲ್ಲ’ ಎಂದರು.
ಆಗ ನ್ಯಾ.ಅರವಿಂದ ಕುಮಾರ್ ಅವರು, ‘ಇದು ಹೈಕೋರ್ಟ್, ಅಧೀನ ಕೋರ್ಟ್ ಅಲ್ಲ. ಇಲ್ಲಿ ಏನಿದ್ದರೂ ಇಂಗ್ಲಿಷ್‌ನಲ್ಲಿಯೇ ವಾದ ಮಂಡನೆ ಮಾಡಬೇಕು’ ಎಂದು ತಿಳಿಸಿದರು. ನಂತರ ಕೋರ್ಟ್ ಕಲಾಪ ಮುಂದುವರೆದಿದೆ.
ಅಂದಹಾಗೆ ಅರವಿಂದ್ ಕುಮಾರ್ ಅವರು ಕಳೆದ ಅಕ್ಟೋಬರ್ 13 ರಂದು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.