ಚಿಕ್ಕೋಡಿ: ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ನೆರೆಯ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಗಡಿ ಭಾಗದ ಕಾರದಗಾ-ರೇಂದಾಳ ರಸ್ತೆಯನ್ನು ತಾಲೂಕು ಆಡಳಿತ ಬಂದ್ ಮಾಡಿದೆ. ಮಹಾರಾಷ್ಟ್ರ ಗಡಿ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ನಿಪ್ಪಾಣಿ ತಾಲೂಕಿನ ಗಡಿ ಭಾಗದಲ್ಲಿ ಮಹಾರಾಷ್ಟ್ರ ಜನ ಬರದಂತೆ ರಸ್ತೆ ಮೇಲೆ ಮಣ್ಣಿನ ಒಡ್ಡು ಹಾಕಿ ಬಂದ್ ಮಾಡಿದ್ದಾರೆ.
ಕಾರದಗಾ ಸಾರ್ವಜನಿಕರು ಮತ್ತು ಪೊಲೀಸರ ಸಹಕಾರದಿಂದ ರಸ್ತೆ ಬಂದ್ ಮಾಡಿರುವುದಾಗಿ ಕಾರದಗಾ ಗ್ರಾಮದ ನಾಗರಿಕ ರಾಜು ಕಿಚಡೆ ತಿಳಿಸಿದ್ದಾರೆ. ಉತ್ತಮ ಪ್ರತಿಕ್ರಿಯೆ: ರಾಜ್ಯ ಸರ್ಕಾರ ವಿಧಿಸಿದ ವಾರಾಂತ್ಯ ಕರ್ಫ್ಯೂಗೆ ಚಿಕ್ಕೋಡಿ ನಗರ ಹಾಗೂ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆಯಿಂದಲೇ ಅಗತ್ಯ ವಸ್ತುಗಳ ಮಳಿಗೆ ಬಿಟ್ಟು ಉಳಿದ ಎಲ್ಲ ಅಂಗಡಿಗಳೂ ಬಂದ್ ಆಗಿದ್ದು ಜನ ಸಂಚಾರ ಅತ್ಯಂತ ವಿರಳವಾಗಿತ್ತು. ನಗರದಲ್ಲಿಯ ಹೆಚ್ಚಿನ ಅಂಗಡಿಗಳು ಬಂದ್ ಇದ್ದು ಜನರ ಓಡಾಟ ಕೂಡ ವಿರಳವಾಗಿತ್ತು. ಅಗತ್ಯ ವಸ್ತುಗಳ ಮಳಿಗೆ ಬಿಟ್ಟರೆ ಇತರೆ ಎಲ್ಲ ಅಂಗಡಿಗಳೂ ಬಂದ್ ಆಗಿದ್ದರಿಂದ ಜನ ಪೇಟೆಗೆ ಬರುವ ಗೋಜಿಗೆ ಹೋಗಿಲ್ಲ. ಕೆಲವೊಂದು ಹೋಟೆಲ್‌ಗಳು ಪಾರ್ಸೆಸ್ ಸರ್ವಿಸ್ ನೀಡಿದ್ದರೆ ಇನ್ನೂ ಕೆಲವು ಹೋಟೆಲ್‌ಗಳು ಬಾಗಿಲು ತೆರೆಯಲೇ ಇಲ್ಲ.
ಕೆಲವೆಡೆ ಹಣ್ಣು, ತರಕಾರಿ ಅಂಗಡಿಗಳು ತೆರೆದಿದ್ದರೂ ಗ್ರಾಹಕರಿಲ್ಲದೇ ಕಾಯುವಂತಾಗಿತ್ತು. ಜನರು ರಸ್ತೆಗಿಳಿಯದ್ದರಿಂದ ಪೊಲೀಸ್ ಇಲಾಖೆ ಕೆಲಸ ಸುಗಮವಾಗಿತ್ತು. ಆದರೂ ಅಲ್ಲಲ್ಲಿ ನಿಂತು ಓಡಾಡುವವರನ್ನು ವಿಚಾರಿಸುತ್ತಿರುವುದು ಕಂಡು ಬಂತು. 2ನೇ ಶನಿವಾರವಾದ್ದರಿಂದ ಸರಕಾರಿ ಕಚೇರಿ, ಬ್ಯಾಂಕುಗಳಿಗೆ ರಜೆ ಇತ್ತು. ಇದರಿಂದ ಜನರ ಓಡಾಟ ವಿರಳವಾಗಿತ್ತು.