ನವದೆಹಲಿ, ಜನವರಿ 07; ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲು ಸಿದ್ಧತೆ ಕೈಗೊಂಡಿದೆ. ಇಂತಹ ಸಂದರ್ಭದಲ್ಲಿಯೇ ದೇಶದಲ್ಲಿಕೋವಿಡ್ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಚುನಾವಣಾ ಆಯೋಗದ ಅಧಿಕಾರಿಗಳು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಜೊತೆ ಗುರುವಾರ ಮಹತ್ವದ ಸಭೆ ನಡೆಸಿದರು. ರಾಜ್ಯಗಳಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿಯನ್ನು ಪಡೆದರು.
ಜನವರಿ 10 ರಿಂದ 13ರೊಳಗೆ 5 ರಾಜ್ಯಗಳ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರಕ್ಕೆ ಚುನಾವಣಾ ಆಯೋಗದ ತಂಡ ಭೇಟಿ ಕೊಟ್ಟು, ಚುನಾವಣಾ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದೆ.
ಕೋವಿಡ್ ಮಾರ್ಗಸೂಚಿಗಳ ಅನ್ವಯ ನಿಗದಿತ ಅವಧಿಯಲ್ಲಿಯೇ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ. 403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ಯಾವ-ಯಾವ ರಾಜ್ಯ? ಉತ್ತರ ಪ್ರದೇಶ (403), ಗೋವಾ (40), ಪಂಜಾಬ್ (117), ಉತ್ತರಾಖಂಡ (70), ಮಣಿಪುರ (60) ರಾಜ್ಯಗಳ ವಿಧಾನಸಭೆ ಚುನಾವಣೆ ಫೆಬ್ರವರಿ ಅಂತ್ಯ ಅಥವ ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಆರೋಗ್ಯ ಸಚಿವಾಲಯದ ಜೊತೆ ಚರ್ಚಿಸಿದ ಬಳಿಕ ಆಯೋಗ ವೇಳಾಪಟ್ಟಿಯನ್ನು ಘೋಷಣೆ ಮಾಡಲಿದೆ.
ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮತ್ತು ತಜ್ಞರ ಜೊತೆ ಚುನಾವಣಾ ಆಯೋಗದ ಅಧಿಕಾರಿಗಳು ಸಭೆ ನಡೆಸಿದರು. ಚುನಾವಣೆ ನಡೆಯುವ 5 ರಾಜ್ಯಗಳಲ್ಲಿ ಲಸಿಕೆ ನೀಡುವ ಕುರಿತು ಹೆಚ್ಚು ಗಮನ ಹರಿಸಬೇಕು ಎಂದು ಆಯೋಗ ಹೇಳಿದೆ.
ಕೋವಿಡ್ ಪರಿಸ್ಥಿತಿ ಕುರಿತು ಸಲಹೆಗಳನ್ನು ಪಡೆದ ಚುನಾವಣಾ ಆಯೋಗ, ಚುನಾವಣೆ ಪ್ರಚಾರ, ಮತದಾನದ ವೇಳೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಜ್ಞರಿಂದ ಸಲಹೆಗಳನ್ನು ಸಹ ಪಡೆದಿದೆ.
ಚುನಾವಣಾ ಆಯೋಗವು ಗುರುವಾರ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಜೊತೆಗೂ ಸಹ ಸಭೆ ನಡೆಸಿದೆ. ಚುನಾವಣೆ ನಡೆಯುವ ರಾಜ್ಯಗಳಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡಿದೆ.
ಚುನಾವಣೆ ನಡೆಯುವ ರಾಜ್ಯಗಳಲ್ಲಿ ಲಸಿಕೆ ನೀಡುವ ಪ್ರಮಾಣವನ್ನು ಏರಿಕೆ ಮಾಡಬೇಕು ಎಂದು ಡಿಸೆಂಬರ್ 27ರಂದು ಚುನಾವಣಾ ಆಯೋಗ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿತ್ತು.
ಸಮಾವೇಶಗಳು ನಿಷೇಧ ಉತ್ತರ ಪ್ರದೇಶ ರಾಜ್ಯದಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಬೃಹತ್ ಸಮಾವೇಶಗಳನ್ನು ಕೋವಿಡ್ ಹರಡುವಿಕೆ ತಡೆಯಲು ರದ್ದುಗೊಳಿಸುತ್ತಿವೆ.
ಚುನಾವಣಾ ಆಯೋಗವು ಲಸಿಕೆ ನೀಡುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಚುನಾವಣಾ ಕರ್ತವ್ಯದಲ್ಲಿ ತೊಡಗುವ ಎಲ್ಲಾ ಸಿಬ್ಬಂದಿಗೆ ಎರಡು ಡೋಸ್ ಲಸಿಕೆ ಆಗಿರುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಗಳಿಗೆ ಸೂಚನೆ ನೀಡಿದೆ.
ಈ ಹಿಂದೆ ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿಯೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪಶ್ಚಿಮ ಬಂಗಾಳ ಸೇರಿದಂತೆ 4 ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗ ಯಶಸ್ವಿಯಾಗಿ ನಡೆಸಿತ್ತು.
ಈಗಲೂ ಸಹ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಚುನಾವಣೆ ನಡೆಸಲು ಆಯೋಗ ಸಿದ್ಧವಾಗುತ್ತಿದೆ. ಆದ್ದರಿಂದ ಅಗತ್ಯ ಕ್ರಮಗಳು ಹೇಗಿರಬೇಕು? ಎಂದು 5 ರಾಜ್ಯಗಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆಯಲಾಗಿದೆ.
ಇತ್ತೇಚೆಗೆ ಕೇಂದ್ರ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ನೇತೃತ್ವದ ಅಧಿಕಾರಿಗಳ ತಂಡ ಉತ್ತರ ಪ್ರದೇಶ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಗೆ ಭೇಟಿ ನೀಡಿತ್ತು. ರಾಜಕೀಯ ಪಕ್ಷಗಳು, ಪೊಲೀಸರು, ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿತ್ತು. ರಾಜಕೀಯ ಪಕ್ಷಗಳು ಅಗತ್ಯ ಮುನ್ನೆಚ್ಚರಿಕೆ ಜೊತೆ ನಿಗದಿಯಂತೆಯೇ ಚುನಾವಣೆ ನಡೆಸಲು ಮನವಿ ಮಾಡಿದ್ದವು.