ಹಾಸನ: ವಂಚನೆ ಪ್ರಕರಣವೊಂದರಲ್ಲಿ ಸಿಲುಕಿ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಮಾಜಿ ಸಚಿವರೂ ಆದ ಎಐಡಿಎಂಕೆ ಮಾಜಿ ಶಾಸಕ ರಾಜೇಂದ್ರ ಬಾಲಾಜಿ ಅವರನ್ನು ಹಾಸನದಲ್ಲಿ ನಿನ್ನೆ(ಬುಧವಾರ) ಮಧ್ಯಾಹ್ನ ತಮಿಳುನಾಡು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
ಹಾಸನ ನಗರದ ವಾರ್ತಾ ಇಲಾಖೆ ಮುಂಭಾಗ ರಾಜೇಂದ್ರ ಬಾಲಾಜಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ನಡುರಸ್ತೆಯಲ್ಲೇ ಕಾರನ್ನು ಅಡ್ಡಗಟ್ಟಿ ಸುತ್ತುವರಿದ ತಮಿಳುನಾಡು ಪೊಲೀಸರು, ರಾಜೇಂದ್ರ ಬಾಲಾಜಿ ಅವರನ್ನು ಬಂಧಿಸಿದರು. ಒಂದು ಕಾರನ್ನು ಅಡ್ಡಗಟ್ಟಿ ಆರೋಪಿಯನ್ನು ಮತ್ತೊಂದು ಕಾರಿಗೆ ಹತ್ತಿಸಿಕೊಳ್ಳುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಶಿವಕಾಶಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಾಲಾಜಿ, 2016ರಲ್ಲಿ ಹಾಲು ಉತ್ಪಾದನೆ ಮತ್ತು ಡೇರಿ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದರು. ಆಗ ವ್ಯಕ್ತಿಯೊಬ್ಬರಿಗೆ ಆವಿನ್ (ತಮಿಳುನಾಡು ಹಾಲು ಉತ್ಪಾದಕರ ಸಹಕಾರ ಒಕ್ಕೂಟ)ನ ಜನರಲ್ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ಒಂದೂವರೆ ಕೋಟಿ ರೂ. ಲಂಚ ಪಡೆದು ವಂಚಿಸಿದ್ದರು ಎನ್ನಲಾಗಿದೆ.
ಇದರಿಂದ ಹಣ ಕಳೆದುಕೊಂಡಿದ್ದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದರಿಂದ ಮಾಜಿ ಸಚಿವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಬಂಧನದಿಂದ ರಕ್ಷಣೆ ಪಡೆಯಲು ನ್ಯಾಯಾಲಯದ ಮೊರೆ ಹೋದಾಗ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಹೀಗಾಗಿ 10 ದಿನಗಳಿಂದ ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದ ಅವರನ್ನು ಹುಡುಕಲು ತಮಿಳುನಾಡು ಸರ್ಕಾರ ಮೂರು ವಿಶೇಷ ತಂಡಗಳನ್ನು ರಚಿಸಿತ್ತು.
ಏತನ್ಮಧ್ಯೆ ಬಾಲಾಜಿ ಬೇಲೂರಿನಲ್ಲಿರುವ ಮಾಹಿತಿ ಕಲೆ ಹಾಕಿದ್ದ ವಿಶೇಷ ತಂಡದ ಪೊಲೀಸರು ಈ ಸಂಬಂಧ ಜಿಲ್ಲಾ ಪೊಲೀಸರಿಗೂ ಮಾಹಿತಿ ನೀಡಿದ್ದರು. ಬುಧವಾರ ಅವರ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ನಗರದ ಬಿ.ಎಂ. ರಸ್ತೆಯಲ್ಲಿ ಅವರ ಬೆನ್ನತ್ತಿದ ಅಧಿಕಾರಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮುಂಭಾಗ ಅವರ ಕಾರು ಅಡ್ಡಗಟ್ಟಿ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ತಮ್ಮ ಕಾರಿಗೆ ಹತ್ತಿಸಿಕೊಂಡರು.