ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಮಕ್ಕಳಿಗೆ ಶರವೇಗದಲ್ಲಿ ಮುಟ್ಟಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಶ್ರೀಗುರುಸಿದ್ಧ ಸ್ವಾಮಿಜೀ ಹುಸಿಕೊಳ್ಳಮಠ ಸಭಾ ಭವನದಲ್ಲಿ ನಡೆದ ಅರಿವಿನ ತಾಯಿಗೆ ನಮನ ಸಾವಿತ್ರಿಬಾಯಿ ಫುಲೆ ಜಯಂತೋತ್ಸವ ಮತ್ತು ಭೀಮಾ ಕೋರೆಗಾಂವ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿಟ್ಟ ಮಹಿಳೆಯಾದ ಸಾವಿತ್ರಿಬಾಯಿ ಫುಲೆ ಜನಿಸದೇ ಇದ್ದಿದ್ದರೆ ಮಹಿಳೆಯರು ಶಿಕ್ಷಣ ಪಡೆಯಲು ವಿಳಂಬವಾಗುತ್ತಿತ್ತು. ಅವರ ಹೋರಾಟದಿಂದ ಈಗ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಬಂದಿದ್ದಾರೆ. ಸಾವಿತ್ರಿಬಾಯಿ ಯಾವುದೇ ಜಾತಿಗೆ ಸೀಮಿತವಾದವರಲ್ಲ. ಅವರು ಇಡೀ ಭಾರತದ ನಾಯಕಿ’ ಎಂದು ಸ್ಮರಿಸಿದರು.
ಸಾವಿತ್ರಿಬಾಯಿ ಫುಲೆ, ಭೀಮಾ ಕೋರೆಗಾಂವ ಹೋರಾಟ ಮತ್ತು ಬುದ್ದ, ಬಸವ, ಅಂಬೇಡ್ಕರ್ ಅವರ ಹೋರಾಟವನ್ನು ನಿಮಗೆಲ್ಲಾ ತಿಳಿಸುವ ಪ್ರಯತ್ನವನ್ನು ಈ ವೇದಿಕೆಯಿಂದ ಮಾಡಿದ್ದಾರೆ. ನಾವೆಲ್ಲರೂ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದಂತ ಸಂವಿಧಾನವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಮನುವಾದಿಗಳ ವಿರುದ್ಧ ಹೋರಾಡಬೇಕು ಎಂದು ತಿಳಿಸಿದರು.