ಕಾಕಿನಾಡ: 2010ರಲ್ಲಿ ಅಮೆರಿಕವಾಸಿಯಾಗಿದ್ದ ಕುಟುಂಬ ಕೆಲ ದಿನಗಳಿಗೆಂದು ಭಾರತಕ್ಕೆ ಬಂದಿತ್ತು. ಆ ಕುಟುಂಬ ಸಮೇತ ಬೀಚಿಗೆ ತೆರಳಿದ್ದರು. ಆಲ್ಲಿ ಅವರ ಕುಟುಂಬ ಕಡಲೆಕಾಯಿ ಮಾರುತ್ತಿದ್ದ ಅಜ್ಜಿಯೊಬ್ಬರಿಂದ ಕಡಲೆ ಖರೀದಿಸಿದ್ದರು.
ಕಡಲೆ ಖರೀದಿಸಿದ ಹಣವನ್ನು ನೀಡಲು ಪ್ರಣವ್ ತಂದೆ ಜೇಬಿಗೆ ಹಾಕಿದರು. ಆದರೆ ಅವರು ತಮ್ಮ ಪರ್ಸನ್ನು ಮನೆಯಲ್ಲೇ ಮರೆತುಬಂದಿದ್ದರು. ಹೀಗಾಗಿ ಆ ಅಜ್ಜಿಯ ಫೋಟೊ ಕ್ಲಿಕ್ಕಿಸಿ, ತಾವು ಹಣವನ್ನು ಮರಳಿಸುವುದಾಗಿ ಭರವಸೆ ನೀಡಿ ಅಲ್ಲಿಂದ ವಾಪಸ್ಸಾಗಿದ್ದರು.
ಇದಾದ ಸ್ವಲ್ಪ ಸಮಯದಲ್ಲೇ ಕುಟುಂಬ ಅಮೆರಿಕಕ್ಕೆ ವಾಪಸ್ಸಾಗಿತ್ತು. ಅಮೆರಿಕಕ್ಕೆ ವಾಪಸ್ಸಾದ ನಂತರ ಆ ಕುಟುಂಬಕ್ಕೆ ಕಡಲೆಕಾಯಿ ಅಜ್ಜಿಯ ಸಾಲ ಹಿಂದಿರುಗಿಸದೇ ಇದ್ದುದು ನೆನಪಾಗಿತ್ತು. 2010ರಲ್ಲಿ ಆಕುಟುಂಬ ಸದಸ್ಯರಾದ ಪ್ರಣವ್ ಗೆ 10 ವರ್ಷ, ಆತನ ತಂಗಿ ಸುಚಿತಾಗೆ ೯.
ಇದೀಗ ಅಜ್ಜಿಯ ಕಡಲೆಕಾಯಿ ಸಾಲವನ್ನು ತೀರಿಸುವ ಸಲುವಾಗಿಯೇ ಅಣ್ನ ತಂಗಿ ಇಬ್ಬರೂ ಭಾರತಕ್ಕೆ ಬಂದು ಕಾಕಿನಾಡಕ್ಕೆ ಬಂದು ಅಜ್ಜಿಯ ವಿಳಾಸವನ್ನು ಪತ್ತೆ ಹಚ್ಚಲು ಹರಸಾಹಸ ಪಟ್ಟಿದ್ದಾರೆ. ಕಡೆಗೂ ಅಜ್ಜಿಯನ್ನು ಪತ್ತೆ ಹಚ್ಚುವಲ್ಲಿ ಅವರಿಬ್ಬರೂ ಸಫಲರಾಗಿದ್ದಾರೆ. ಹಳ್ಳಿಯೊಂದರಲ್ಲಿ ವಾಸವಿದ್ದ ಕಡಲೆಕಾಯಿ ಅಜ್ಜಿಗೆ 25,000 ರೂ. ನೆರವನ್ನೂ ಅವರು ನೀಡಿದ್ದಾರೆ.