ಅಥಣಿ: ತಾಂತ್ರಿಕ ದೋಷದಿಂದಾಗಿ ಕೆಲವು ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ ವಿಳಂಬವಾಗಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹಾಗೂ ತಾವು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ಸಂತ್ರಸ್ತರಿಗೆ ಪರಿಹಾರ ಕೊಡಿಸುತ್ತೇವೆ ಎಂದು ಶಾಸಕ ಮಹೇಶ ಕುಮಟಳ್ಳಿ ಭರವಸೆ ನೀಡಿದ್ದಾರೆ.
ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ನಬಾರ್ಡ25 ರಲ್ಲಿ ಯೋಜನೆ ಅಡಿಯಲ್ಲಿ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲಲೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಪ್ರವಾಹಕ್ಕೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ, ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಹೆಚ್ಚುವರಿ ಬೆಳೆ ಪರಿಹಾರಕ್ಕೆ ಒತ್ತಾಯಿಸುತ್ತೆ ಎಂದು ತಿಳಿಸಿದರು.
ಅಥಣಿ ತಾಲೂಕಿನಲ್ಲಿ ಕೆಲವು ಕೆಎಂಎಫ್ ಸೊಸೈಟಿಗಳು ರೈತರಿಂದ ಸುಲಿಗೆ ಮಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸುತ್ತೇನೆ ಎಂದರು.
ಸ್ಥಳೀಯ ಶಾಸಕ ಕಮಿಷನ್ ಮೇಲೆ ಕೆಲಸ ಮಾಡುತ್ತಿದ್ದಾರೆ ಕಾಂಗ್ರೆಸ್ ಮುಖಂಡ ಆರೋಪಕ್ಕೆ ಪ್ರತಿಕ್ರಿಯಿಸಿ, ಶಿವಯೋಗಿ ನಾಡಿನ ಜನತೆ ಕಾಯಕ ಮಾಡಲು ನನಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಅಭಿವೃದ್ದಿಯತ್ತ ನನ್ನ ಗುರಿ. ಇಂತಹ ಆರೋಪಕ್ಕೆ ತಲೆ ಕಡೆಸಿಕೊಳ್ಳಲ್ಲ ಎಂದರು.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಅಥಣಿ ಕ್ಷೇತ್ರದ ಮೇಲೆ ವಿಶೇಷ ಪ್ರೀತಿ ಇದೆ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸುಮಾರು 1600 ಕೋಟಿ ವೆಚ್ಚದ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ, ಬಹುದಿನಗಳ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.