ಬೆಳಗಾವಿ,ಡಿ.21- ರಾಜ್ಯದಲ್ಲಿ ಕಟ್ಟಡವಿಲ್ಲದ ಪ್ರಮುಖ ಪೊಲೀಸ್ ಠಾಣೆಗಳಿಗೆ ನೂತನ ಕಟ್ಟಡಗಳನ್ನು ಮಂಜೂರು ಮಾಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 100 ಠಾಣೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಎಸ್.ಕುಮಾರಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 200 ಕೋಟಿ ರೂ. ವೆಚ್ಚದಲ್ಲಿ ಹೊಸ ಪೊಲೀಸ್ ಠಾಣೆ ನಿರ್ಮಾಣ ಮಾಡಲಾಗುತ್ತಿದೆ. ಉಪಠಾಣೆಗಳ ನಿರ್ಮಾಣದ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಪೊಲೀಸ್ ಗೃಹ 2025ರ ಯೋಜನೆಯಡಿ ನೂತನ ವಸತಿ ಗೃಹಗಳ ನಿರ್ಮಾಣಕ್ಕಾಗಿ ಸೊರಬ ಮತ್ತು ಅನವಟ್ಟಿ ಠಾಣಾ ವ್ಯಾಪ್ತಿಯಲ್ಲಿ ತಲಾ 12 ವಸತಿಗೃಹಗಳನ್ನು ನಿರ್ಮಿಸಲು ಪರಿಗಣಿಸಲಾಗಿದೆ. ತಾಳಗುಪ್ಪ ಉಪಠಾಣೆ ವ್ಯಾಪ್ತಿಯಲ್ಲಿ 4 ವಸತಿಗೃಹಗಳಿದ್ದು, ಸುಸ್ಥಿತಿಯಲ್ಲಿವೆ. ಹೀಗಾಗಿ ಹೆಚ್ಚುವರಿ ವಸತಿ ಗೃಹಗಳ ಅವಶ್ಯಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸೊರಬ ಮತ್ತು ಅನವಟ್ಟಿ ಪೊಲೀಸ್ ಠಾಣೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸ್ಥಳಾಂತರ ಮಾಡುವುದಿಲ್ಲ ಎಂದರು.