ಬೆಂಗಳೂರು: ಮಹಾ ಮಳೆ ಕಡಿಮೆ ಆಗಿದ್ರೂ ಉತ್ತರ ಕರ್ನಾಟಕವನ್ನು ಪ್ರವಾಹ ಬಿಟ್ಟುಬಿಡದಂತೆ ಕಾಡುತ್ತಿದೆ. ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಗದಗ, ಧಾರವಾಡ, ಕೊಪ್ಪಳ ಸೇರಿ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ ಆಗ್ತಿದೆ. ಸರ್ಕಾರ ಈ ಕಡೆ ಕಿಂಚಿತ್ತೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬೇರೆಯದ್ದೇ ರಾಜಕಾರಣದಲ್ಲಿ ಮುಳುಗಿಬಿಟ್ಟಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಆರು ಹಳ್ಳಿಗಳು ಜಲಾವೃತವಾಗಿವೆ. 20ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರವಾಹ ಆತಂಕ ಶುರುವಾಗಿದೆ. ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಬದಾಮಿ ತಾಲೂಕಿನ ಶಿವಯೋಗ ಮಂದಿರ ಸೇತುವೆ ಸಂಪೂರ್ಣವಾಗಿ ಮುಳುಗಿದ್ದು, ಪರಿಸ್ಥಿತಿ ಭೀಕರವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ ಆರ್ಭಟಕ್ಕೆ ಗೋಕಾಕ್ ತಾಲೂಕಿನ ಹಡಗಿನಾಳ ಗ್ರಾಮದ ದೇಗುಲ ನೀರಲ್ಲಿ ಮುಳುಗಿದೆ. ಇಂದು ನಡೆಯಬೇಕಿದ್ದ ಮುತ್ತೇಶ್ವರನ ಜಾತ್ರೆ ರದ್ದಾಗಿದೆ. ಪ್ರವಾಹದ ಹೊಡೆತಕ್ಕೆ ಗೋಕಾಕ್-ಲೋಳಸೂರ ಸೇತುವೆ ಮೇಲಿನ ರಸ್ತೆ ಕೊಚ್ಚಿಕೊಂಡು ಹೊಗಿದೆ. ಸಾವಿರಾರು ಎಕರೆ ಬೆಳೆ ನೀರು ಪಾಲಾಗಿದೆ.
ರಾಯಚೂರಿನ ಕರಕಲಗಡ್ಡಿ ನಡುಗಡ್ಡೆಯಲ್ಲಿ ನಾಲ್ವರು ಸಿಲುಕಿದ್ದು, ಅನ್ನ ನೀರಿಗಾಗಿ ಪರದಾಡ್ತಿದ್ದಾರೆ. ಟಿಬಿ ಡ್ಯಾಂನಿಂದ ನೀರು ಬಿಟ್ಟ ಕಾರಣ ರಾಯಚೂರಿನ ಸಿಂಧನೂರು, ಮಾನ್ವಿ, ರಾಯಚೂರು ತಾಲೂಕಿಗೆ ಪ್ರವಾಹ ಭೀತಿ ಎದುರಾಗಿದೆ. ಗದಗದ ಕೊಣ್ಣೂರು ಬಳಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದೆ. ಗದಗ ಬಳಿ ಪ್ರವಾಹದಲ್ಲಿ ಸಿಲುಕಿ ಪರದಾಡ್ತಿದ್ದ ಮಂಗವೊಂದನ್ನ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.