ಕಲಬುರಗಿ: ರಾಜಕೀಯ ನಾಯಕರಿಬ್ಬರ ವಿಚಾರದಲ್ಲಿ ಸ್ವಾಮೀಜಿಗಳಿಬ್ಬರ ನಡುವೆ ವಾಕ್ಸಮರ ಏರ್ಪಟ್ಟಿದೆ. ಬಿಟ್ಕಾಯಿನ್ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ನಡೆದ ಮಾತಿನ ಜಟಾಪಟಿ ಈಗ ಕಲಬುರಗಿಯ ಸುಲಫಲ ಮಠದ ಶ್ರೀ ಮಹಾಂತ ಸ್ವಾಮೀಜಿ ಮತ್ತು ಆಂದೋಲಾ ಮಠದ ಸಿದ್ದಲಿಂಗ ಸ್ವಾಮಿಗಳ ನಡುವೆ ನಡೆದಿದೆ.
ಪ್ರಿಯಾಂಕ್ ಖರ್ಗೆ ಗಂಡಸೋ, ಹೆಂಗಸೋ ಎಂದಿರುವ ಪ್ರತಾಪ ಸಿಂಹಗೆ ಮೈಸೂರಿಗೆ ತೆರಳಿ ಚಡ್ಡಿ ಬಿಚ್ಚಿ ಹೊಡಿತೀವಿ ಎಂದು ಸುಲಫಲ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದ್ದರು. ಸುಲಫಲ ಶ್ರೀಗಳ ಮಾತಿಗೆ ಜೇವರ್ಗಿ ತಾಲೂಕಿನ ಆಂದೋಲಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಜಕ್ಕೂ ನಿಮಗೆ ತಾಕತ್ತಿದ್ರೆ, ಪ್ರತಾಪ ಸಿಂಹರ ಚಡ್ಡಿ ಬಿಚ್ಚಿ ಹೊಡೀರಿ. ಅಂದಾಗ ಮಾತ್ರ ಜನರು ನೀವು ಸ್ವಾಮಿಗಳು ಅಂತ ಒಪ್ಪಿಕೊಳ್ಳುತ್ತಾರೆ. ನೀವು ಕೆಲ ರಾಜಕಾರಣಿಗಳ ಓಲೈಕೆಗೆ ಮುಂದಾಗಿ, ಬಕೆಟ್ ಸ್ವಾಮಿಗಳು ಅಂತ ಖ್ಯಾತಿ ಪಡೆದಿದ್ದೀರಿ ಎಂದು ಕಿಡಿಕಾರಿದ್ದಾರೆ.
ಇದೇ ಪ್ರಿಯಾಂಕ್ ಖರ್ಗೆ ಈ ಹಿಂದೆ ಪ್ರಧಾನಿ ಮೋದಿ ಹುಟ್ಟಿನ ಬಗ್ಗೆ ಅವಹೇಳಕಾರಿಯಾಗಿ ಮಾತಾಡಿದ್ದರು. ಆಗ ಎಲ್ಲಿ ಹೋಗಿದ್ರಿ ಸುಲಫಲ ಸ್ವಾಮಿಗಳೇ ? ಕೂಡಲೇ ನೀವು ಬೇಷರತ್ತಾಗಿ ಕ್ಷಮೆ ಕೇಳಿ. ಇಲ್ಲದಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸುಲಫಲ ಮಠದ ಶ್ರೀ ಮಹಾಂತ ಸ್ವಾಮೀಜಿಗೆ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಖಡಕ್ ಎಚ್ಚರಿಕೆ ನೀಡಿದ್ದಾರೆ.