ಬೆಂಗಳೂರು: ಹೃದಯಾಘಾತದಿಂದ ಸಾವನ್ನಪ್ಪಿರುವ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ಇಡೀ ಕನ್ನಡ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಅಸಾಧ್ಯವಾದ ನೋವು. ಇಂದು ಕನ್ನಡ ಚಿತ್ರರಂಗದ ವತಿಯಿಂದ ಪುನೀತ ನಮನ ಕಾರ್ಯಕ್ರಮದ ಮೂಲಕ ಅಗಲಿದ ’ರಾಜಕುಮಾರ’ನಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ ಪುನೀತ ನಮನ ಕಾರ್ಯಕ್ರಮದಲ್ಲಿ ಕನ್ನಡ, ತೆಲಗು, ತಮಿಳು ಚಿರರಂಗದ ಗಣ್ಯರು, ಸಿಎ ಬಸವರಾಜ್ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ.
ಸಾಹಿತಿ ನಾಗೇಂದ್ರ ಪ್ರಸಾದ್ ರಚನೆಯ ಗೀತೆಯ ಮೂಲಕ ಮೇಣದ ಬತ್ತಿ ಹಚ್ಚಿ ಪುನೀತ್ ರಾಜ್ ಕುಮಾರ್ ಅವರಿಗೆ ದೀಪ ನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಬಳಿಕ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಆಘಾತವನ್ನುಂಟು ಮಾಡಿದೆ. ಅತಿ ಚಿಕ್ಕವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿನ ಅವರ ಸಾಧನೆಗೆ ಪುನೀತ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದರು.