ಮಂಡ್ಯ, ನ.3- ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯನ್ನು ಮುಂದಿನ ನೂರು ವರ್ಷಗಳವರೆಗೆ ಬಳಕೆಯಾಗುವಂತೆ ರಕ್ಷಣೆ ಮತ್ತು ಸಂಪೂರ್ಣ ಆಧುನೀಕರಣಗೊಳಿಸುವ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾ ವರಿ ನಿಗಮದ ವತಿಯಿಂದ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಬಳಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಕೆಆರ್‌ಎಸ್ ಅಣೆಕಟ್ಟಿಗೆ ಒಂದು ಇತಿಹಾಸವಿದೆ. ಒಂದು ವೇಳೆ ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯನವರು ಅಣೆಕಟ್ಟು ನಿರ್ಮಾಣಕ್ಕೆ ಮನಸ್ಸು ಮಾಡದಿದ್ದರೆ ಈ ಭಾಗ ನೀರಾವರಿ ಪ್ರದೇಶವಾಗುತ್ತಿರಲಿಲ್ಲ. ಕಾವೇರಿ ಮಾತೆ ನಮಗೆ ಹಲವು ದಶಕಗಳಿಂದ ಅನ್ನ-ನೀರು ಕೊಡುತ್ತಿದ್ದಾಳೆ. ಆಣೆಕಟ್ಟು ಇನ್ನೂ ನೂರು ವರ್ಷ ಬಳಕೆಯಾಗಲು ರಕ್ಷಣೆ ಮತ್ತು ಆಧುನೀಕರಣಕ್ಕೆ ಆದ್ಯತೆ ನೀಡಬೇಕಿದೆ ಎಂದರು.ಕುಡಿಯುವ ನೀರಿನ ಸಮಸ್ಯೆಗಳ ಬಗೆಹರಿಸಲು ಮೇಕೆದಾಟು ಯೋಜನೆ ಕೈಗೆತ್ತಿಕೊಂಡಿದ್ದೇವೆ, ತಮಿಳುನಾಡಿನವರು ಕ್ಯಾತೆ ತೆಗೆದಿದ್ದಾರೆ, ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದರು. ನಾವು ನಮ್ಮ ಯೋಜನೆ ಪೂರ್ಣಗೊಳಿಸಲು ಬದ್ದರಾಗಿದ್ದೇವೆ, ನ್ಯಾಯ ಸಮ್ಮತ್ತ ಯೋಜನೆ, ಎರಡೂ ರಾಜ್ಯಗಳ ಮಧ್ಯೆ ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು, ಈ ಯೋಜನೆಯನ್ನ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ. ನಾರಾಯಣಗೌಡ ಮಾತನಾಡಿ, ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸಲು ಹಣದ ಕೊರತೆ ಉಂಟಾದ ಸಂದರ್ಭದಲ್ಲಿ ಮಹಾರಾಜರು ಸಂಸ್ಥಾನದ ಚಿನ್ನಾಭರಣಗಳನ್ನು ಮುಂಬೈನಲ್ಲಿ 9 ಕೋಟಿಗೆ ಮಾರಿ, ಸರ್ ಎಂ. ವಿಶ್ವೇಶ್ವರಯ್ಯ ರವರ ನೇತೃತ್ವದಲ್ಲಿ ಕನ್ನಂಬಾಡಿ ನಿರ್ಮಾಣ ಮಾಡಿರುವುದು ರೈತರಿಗೆ ಹಾಗೂ ಈ ಭಾಗದ ಜನರಿಗೆ ಸೌಭಾಗ್ಯವಾಗಿದೆ ಎಂದರು.