ಶಿವಮೊಗ್ಗ: ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಸಿಯೂಟ ಸಿಬ್ಬಂದಿ ಜಿಲ್ಲೆಯಲ್ಲಿ ಇಂದು ಪ್ರತಿಭಟನೆ ನಡೆಸಿದರು.
ನಗರದ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ಸಿಬ್ಬಂದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಬಂದ ದಿನದಿಂದ ಬಿಸಿಯೂಟ ಸಿಬ್ಬಂದಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಿಸಿಯೂಟ ಸಿಬ್ಬಂದಿಗೆ ವೇತನ ನೀಡುವಂತೆ ಹಲವು ದಿನದಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಅಲ್ಲದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ಆದರೂ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದರು.
ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದಾದರೆ ಸರ್ಕಾರ ಏಕೆ ನಡೆಸುತ್ತೀರಾ? ಶಾಸಕರುಗಳನ್ನು ಖರೀದಿ ಮಾಡಲು ಹಣವಿದೆ ಸಿಬ್ಬಂದಿಗೆ ವೇತನ ನೀಡಲು ನಿಮ್ಮ ಬಳಿ ಹಣ ಇಲ್ಲವೇ? ಎಂದು ಪ್ರಶ್ನಿಸಿದರು.
ಇನ್ನಾದರೂ ಬಿಸಿಯೂಟ ಸಿಬ್ಬಂದಿಗೆ ವೇತನ ನೀಡಲು ಕ್ರಮ ಕೈಗೊಳ್ಳಿ. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಬಿಸಿಯೂಟದ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.