ಹಾವೇರಿ: ಹೋರಾಟ ನಿರತ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಜೀಪ್ ಹರಿಸುತ್ತಾನೆ ಎಂದರೆ ದೇಶ ಯಾವ ಕಡೆ ಹೊರಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದವರನ್ನು ರೈತರೇ ಅಲ್ಲ ಎಂದು ಬಿಜೆಪಿಯವರು ಪಟ್ಟ ಕಟ್ಟುತ್ತಾರೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ಸುಂಕದ ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿ ನಗರದ ವಿದ್ಯಾನಗರ (ಪಶ್ಚಿಮ) ಭಾಗದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಂಗಳವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜೆ.ಡಿ.ಎಸ್ ಪಕ್ಷ ರಾಜಕೀಯ ಹೋರಾಟ ಮಾಡುತ್ತಿಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದನ್ನು ರೈತರು ಮರೆತಿಲ್ಲ. ಬಿಜೆಪಿ ಸರ್ಕಾರ ರೈತರಿಗೆ ಏನು ಕೊಡುಗೆ ನೀಡಿದೆ ಎಂಬುದನ್ನು ಜನರ ಮುಂದಿಡಲಿ. ರೈತರ ಸಂಕಷ್ಟ ಪರಿಹರಿಸಲು ಸಾಧ್ಯವಾಗದ ಬಿಜೆಪಿ ಸರ್ಕಾರಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಅ.23ರಂದು ಹಾನಗಲ್ ಉಪ ಚುನಾವಣೆಯ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಗಮಿಸಲಿದ್ದು, ಈ ಪ್ರಚಾರ ಕಾರ್ಯಕ್ರಮಕ್ಕೆ ತಾಲ್ಲೂಕು ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹಾದಿ, ತಾಲ್ಲೂಕು ಘಟಕದ ಉಪಾಧ್ಯಕ್ಷ ಅಮೀರಜಾನ್ ಬೇಪಾರಿ, ಯುವ ಘಟಕದ ಅಧ್ಯಕ್ಷ ಸುನೀಲ ದಂಡೆಮ್ಮನವರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ಜಮಾದಾರ, ತಾಲ್ಲೂಕು ಕಾರ್ಯದರ್ಶಿ ಸುರೇಂದ್ರ ಮೊಟೇಬೆನ್ನೂರ, ಜಿಲ್ಲಾ ವಕ್ತಾರ ಮಹಾಂತೇಶ ಬೇವಿನಹಿಂಡಿ, ಕಾರ್ಮಿಕ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ನೆಗಳೂರ ಇದ್ದರು.
Laxmi News 24×7