ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಅನ್ಯಕೋಮಿನ ಸ್ನೇಹಿತೆಯರ ಜತೆ ಮಾತನಾಡುತ್ತಿದ್ದ ಯುವಕನನ್ನು ಪ್ರಶ್ನಿಸಿದ ಕೆಲ ಸ್ಥಳೀಯರು, ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಒಂದು ವಾರದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಕಾಲೇಜು ಸ್ನೇಹಿತೆಯರ ಜತೆಗೆ ಮಾತನಾಡುತ್ತಿದ್ದ ಅನ್ಯಕೋಮಿನ ಯುವಕ ಮತ್ತು ಯುವತಿಯರ ಜತೆಗೆ ವಾಗ್ವಾದ ನಡೆಸಿದ ಕೆಲವರು, ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ ಯುವತಿಯರಿಬ್ಬರನ್ನು ಕೂಡಿ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಯುವತಿಯರು ಮುಖಕ್ಕೆ ಕಟ್ಟಿದ ಬಟ್ಟೆ ಬಿಚ್ಚಿಸಿ ನಿನ್ನ ಹೆಸರೇನು? ವಿಳಾಸ ಯಾವುದು ಎಂದು ಗದರಿದ್ದಾರೆ. ನಾವು ಕಾಲೇಜು ಸ್ನೇಹಿತರು ಎಂದು ಅಂಗಲಾಚಿದ್ರೂ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ ರಾಜಿಸಂಧಾನ ಮಾಡಿ ಮಾರ್ಕೆಟ್ ಠಾಣೆ ಪೊಲೀಸರು ಕಳುಹಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಈ ರೀತಿಯ ಪ್ರಕರಣಗಳನ್ನು ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪ್ರಕರಣ ಸಂಬಂಧ ಈಗಾಗಲೇ ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.
ಎಲ್ಲಾ ಘಟನೆಗಳಲ್ಲೂ ಪೋಲೀಸರು ಕಾನೂನು ಪ್ರಕಾರ ಕ್ರಮಕೈಗೊಂಡಿದ್ದಾರೆ. ಅದರಲ್ಲಿ ಪ್ರಶ್ನೆನೇ ಇಲ್ಲ. ಯಾವ ಧರ್ಮದವರು ಅಂತೇನಿಲ್ಲ. ಕೆಲವರು ಮಾನಸಿಕವಾಗಿ ಈ ರೀತಿ ಇರುತ್ತಾರೆ. ಪೋಲೀಸರು ಕ್ರಮ ಕೈಗೊಳ್ಳುವ ಮೂಲಕ ಸಂದೇಶ ರವಾನೆ ಮಾಡುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.