ತಿರುವನಂತಪುರ: ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಪರಿಣಾಮ ಮೃತರ ಸಂಖ್ಯೆ ಸೋಮವಾರ 38ಕ್ಕೆ ಏರಿದೆ. ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕಲ್ ಪಂಚಾಯಿತಿಯ ಪ್ಲಾಪಲ್ಲಿಯಲ್ಲಿ ಭೂಕುಸಿತದ ಅವಶೇಷದಡಿಯಲ್ಲಿ ಏಳು ವರ್ಷದ ಬಾಲಕಿ ಸಹಿತ 13 ಶವಗಳು ಪತ್ತೆಯಾಗಿವೆ. ಮುಂಡಕಾಯಂನಲ್ಲಿ ಪ್ರವಾಹದ ರಭಸಕ್ಕೆ ಒಂದು ಮನೆ ಕೊಚ್ಚಿಕೊಂಡು ಹೋಗಿದೆ. ಇಡುಕ್ಕಿ ಜಿಲ್ಲೆಯ ಕೊಕ್ಕಾಯರ್ ಮತ್ತು ಪೆರುವನಂತಮ್ ಗ್ರಾಮಗಳಲ್ಲಿ ಎಂಟು ಮೃತದೇಹಗಳು ದೊರಕಿವೆ. ಈ ಮೂಲಕ ಸತ್ತವರ ಸಂಖ್ಯೆ 38ಕ್ಕೆ ಹೆಚ್ಚಳವಾಗಿದೆ.
ಎರ್ನಾಕುಲಂನಲ್ಲಿ ಪ್ರವಾಹದ ನೀರಿನಲ್ಲಿ 18 ವರ್ಷದ ಯುವತಿ ಭಾನುವಾರ ಕೊಚ್ಚಿಕೊಂಡು ಹೋಗಿದ್ದಳು. ತ್ರಿಶ್ಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಪ್ರವಾಹದಿಂದ ಮರಣಿಸಿದ್ದಾರೆ. ಇಡುಕ್ಕಿ ಜಿಲ್ಲೆಯ ಕುಂಜಾರ್ನಲ್ಲಿ ಶನಿವಾರ ಒಂದು ಕಾರು ಪ್ರವಾಹದಲ್ಲಿ ಮುಳುಗಿ ಇದ್ದರಲ್ಲಿದ್ದ ಇಬ್ಬರು ಸತ್ತಿದ್ದರು. ಇಡುಕ್ಕಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಮಳೆ ಪೀಡಿತ ಉಳಿದ 10 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಮುಂದುವರಿಸಲಾಗಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ತಂಡಗಳು (ಎನ್ಡಿಆರ್ಎಫ್) ಪರಿಹಾರ ಕಾರ್ಯವನ್ನು ಚುರುಕಿನಿಂದ ನಡೆಸುತ್ತಿವೆ. ರಾಜ್ಯ ವಿಪತ್ತು ಸ್ಪಂದನಾ ತಂಡ (ಎಸ್ಡಿಆರ್ಎಫ್)ಗಳು ದಿನದ 24 ತಾಸೂ ಕಾರ್ಯನಿರ್ವಹಿಸುತ್ತಿವೆ. ಕಣ್ಣೂರು, ಪಾಲಕ್ಕಾಡ್, ಕೊಲ್ಲಂ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಐದು ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
4 ಲಕ್ಷ ರೂ. ಪರಿಹಾರ ಘೋಷಣೆ: ಮೃತರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಘೊಷಿಸಿದೆ. 184 ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದ್ದು, ಇಲ್ಲಿ 1,250ಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಪಡೆದಿವೆ. ಈ ಮಧ್ಯೆ, ಸಿಎಂ ಪಿಣರಾಯಿ ವಿಜಯನ್ ಉನ್ನತ ಮಟ್ಟದ ತುರ್ತು ಸಭೆ ನಡೆಸಿದ್ದು, ಮಳೆಯ ಅನಾಹುತದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜತೆಗೆ ಪರಿಹಾರ ಕಾರ್ಯಗಳನ್ನು ಚುರುಕಿನಿಂದ ನಡೆಸಲು ಸೂಚಿಸಿದ್ದಾರೆ. ಮಳೆಯ ಕಾರಣ ರಾಜ್ಯದ ಬಹುತೇಕ ಅಣೆಕಟ್ಟೆಗಳು ಭರ್ತಿಯಾಗಿವೆ. 10 ಡ್ಯಾಂಗಳಲ್ಲಿ ರೆಡ್ ಅಲರ್ಟ್ ಘೊಷಿಸಲಾಗಿದೆ. ಪಟ್ಟಣಂತ್ತಿಟ್ಟ ಜಿಲ್ಲೆಯ ಕಾಕ್ಕಿ ಅಣೆಕಟ್ಟೆ 983.5 ಅಡಿ ತುಂಬಿದ್ದು, ಭಾನುವಾರ ಬೆಳಗ್ಗೆ ಇದರ ಗೇಟ್ಗಳನ್ನು ತೆರೆಯಲಾಗಿದೆ. ಈ ಡ್ಯಾಂನ ಗರಿಷ್ಠ ಸಾಮರ್ಥ್ಯ 986.33 ಅಡಿ. ಇಡುಕ್ಕಿ ಡ್ಯಾಂನಲ್ಲಿ 2396.86 ಅಡಿ (ಸಮುದ್ರ ಮಟ್ಟದಿಂದ) ನೀರು ತುಂಬಿದೆ.
ಕಡಾಯಿಯಲ್ಲಿ ಬಂದ ಮದುಮಕ್ಕಳು!

ಪ್ರವಾಹ ಮತ್ತು ಭೂಕುಸಿತದಿಂದ ಜನಜೀವನ ವ್ಯತ್ಯಯಗೊಂಡಿರುವ ಮಧ್ಯೆ, ತಳವಾಡಿಯಲ್ಲಿ ಆರೋಗ್ಯ ಕಾರ್ಯಕರ್ತರಾದ ಆಕಾಶ್ ಮತ್ತು ಐಶ್ಚರ್ಯಾ ಪ್ರವಾಹ ಪೀಡಿತ ಪ್ರದೇಶದ ಮದುವೆ ಛತ್ರಕ್ಕೆ ಅಲ್ಯುಮಿನಿಯಂನ ದೊಡ್ಡ ಕಡಾಯಿಯಲ್ಲಿ ಬಂದು ಸೇರಿದ್ದಾರೆ. ಮಿತಸಂಖ್ಯೆಯಲ್ಲಿದ್ದ ಸಂಬಂಧಿಗಳ ಮಧ್ಯೆ ಸರಳವಾಗಿ ವಿವಾಹ ಆಗಿದ್ದಾರೆ.
ದೆಹಲಿಯಲ್ಲಿ ದಾಖಲೆ ಮಳೆ: ನವದೆಹಲಿಯ ಸಫ್ಡರ್ಜಂಗ್ನಲ್ಲಿ 85 ಮಿಲಿಮೀಟರ್ , ಪಾಲಂನಲ್ಲಿ 55 ಎಂ.ಎಂ. ಮಳೆ ಸೋಮವಾರ ಬೆಳಗ್ಗೆ 5.30ರವರೆಗೆ ದಾಖಲಾಗಿದೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ರಾಜಧಾನಿಯ ಹಲವು ಪ್ರದೇಶಗಳು ಜಲಾವೃತವಾಗಿತ್ತು. ಸಂಚಾರ ದಟ್ಟಣೆ ಉಂಟಾಗಿತ್ತು. ಉತ್ತರ ಪ್ರದೇಶ, ಹಿಮಾಚಲ ಪ್ರದೇಶಗಳ ಬಹುತೇಕ ಕಡೆ ಭಾರಿ ಮಳೆ ಸುರಿದಿದೆ. ಮಂಗಳವಾರವೂ ಮಳೆ ಸುರಿಯುವ ಸಾಧ್ಯತೆ ಇದೆ.
ಚಾರ್ಧಾಮ್ ಯಾತ್ರೆ ಸ್ಥಗಿತ: ಉತ್ತರಾಖಂಡದಲ್ಲಿ ಮಳೆಯ ಕಾರಣ ಚಾರ್ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಉತ್ತರಾಖಂಡ ಸರ್ಕಾರ ಆದೇಶಿಸಿದೆ. ಯಾತ್ರಾರ್ಥಿಗಳು ಹರಿದ್ವಾರ ಮತ್ತು ಋಷಿಕೇಶದಲ್ಲೆ ಉಳಿಯುವಂತೆ ಸೂಚಿಸಲಾಗಿದೆ. ತೋಪವನ ಚಂದ್ರಭಾಗ ಸೇತುವೆಯನ್ನು ದಾಟಲು ವಾಹನಗಳಿಗೆ ಅನುಮತಿ ನಿರಾಕರಿಸಲಾಗಿದೆ. ಋಷಿಕೇಶದಲ್ಲಿ ಲಕ್ಷ್ಮಣ ಜೂಲಾ ಮತ್ತು ಇನ್ನೊಂದು ಸೇತುವೆಯಲ್ಲೂ ಇದೇ ನಿಯಮ ಜಾರಿ ಮಾಡಲಾಗಿದೆ.