ಬೆಂಗಳೂರು: ಟೊಮ್ಯಾಟೊ ಸೇರಿದಂತೆ ತರಕಾರಿಗಳ ಬೆಲೆ ದಿಢೀರ್ ಏರಿಕೆ ಕಂಡಿದೆ. ರಾಜ್ಯದ ಹಲವೆಡೆ ಭಾರಿ ಮಳೆ ಹಿನ್ನೆಲೆ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು,ಟೊಮ್ಯಾಟೊ, ಕ್ಯಾರೆಟ್ ಬೆಲೆಗಳು ಏರಿಕೆಯಾಗಿವೆ. ಪ್ರತೀ ತರಕಾರಿ ಮೇಲೆ 10 ರಿಂದ 20 ರೂಗಳಷ್ಟು ಹೆಚ್ಚಳವಾಗಿದ್ದು ಯಾವ ತರಕಾರಿ ಬೆಲೆ ಎಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ.
ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 30 ರಿಂದ 40 ರೂ. ಗೆ ಏರಿಕೆ
ಹಸಿ ಮೆಣಸಿನಕಾಯಿ ಕೆ.ಜಿ 50 ರಿಂದ 70ಕ್ಕೆ ಏರಿಕೆ
ಬೆಂಡೇಕಾಯಿ 40 ರಿಂದ 60 ರೂ.ಗೆ ಏರಿಕೆ
ಹೂಕೋಸು ಕೆಜಿ 30 ರಿಂದ 40ಕ್ಕೆ ಏರಿಕೆ
ಬದನೆಕಾಯಿ 30 ರಿಂದ 40 ರೂ. ಏರಿಕೆ
ಹಾಗಲಕಾಯಿ 40 ರಿಂದ 50 ರೂ.ಗೆ ಏರಿಕೆ
ಟೊಮೆಟೊ ಬೆಲೆಯಲ್ಲೂ ಏರಿಕೆ
ಕಳೆದ ತಿಂಗಳು ಒಂದು ಕೆ.ಜಿ 10 ರಿಂದ 15 ರೂಪಾಯಿ ಇದ್ದ ಟೊಮೆಟೊ ಬೆಲೆ. ಈಗ ಬರೋಬ್ಬರಿ 60 ರಿಂದ 70 ರೂಪಾಯಿಗೆ ಏರಿಕೆಯಾಗಿದೆ. ದಿಢೀರನೆ ಒಂದು ಕೆ.ಜಿಗೆ 60 ರೂಪಾಯಿ ಏರಿಕೆ ಕಂಡಿದೆ. ರಾಜ್ಯದಲ್ಲಾಗುತ್ತಿರುವ ಭಾರೀ ಮಳೆಗೆ ಬೆಳೆ ನಾಶವಾಗಿದೆ. ಜೊತೆಗೆ ನೆರೆ ರಾಜ್ಯಗಳಿಂದ, ಬೆಂಗಳೂರಿನ ಸುತ್ತಮುತ್ತಲಿನ ಭಾಗಗಳಿಂದ ಬರುತ್ತಿದ್ದ ಟೊಮೆಟೊ ಬರುತ್ತಿಲ್ಲ. ಹೀಗಾಗಿ ಟೊಮೆಟೊ ಹಣ್ಣಿನ ಬೆಲೆ ಏರಿಕೆ ಕಾಣುತ್ತಿದೆ.
ಮಹಾರಾಷ್ಟ್ರದಿಂದಲೂ ಈ ಬಾರಿ ನಗರಕ್ಕೆ ಟೊಮೆಟೊ ಪೂರೈಕೆಯಾಗಿಲ್ಲ. ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ 100 ರೂಪಾಯಿ ದಾಟಿದ್ರೂ ಅಚ್ಚರಿಯಿಲ್ಲ. ದಿನ ಬಳಕೆ ಸಾಮಾಗ್ರಿಗಳ ಬೆಲೆ ಏರಿಕೆ ನಡುವೆ ಮತ್ತೊಂದು ದುಬಾರಿ ಹೊಡೆತ ಕೊಟ್ಟಿದೆ. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ 20 ರಿಂದ 22 ಕೆ.ಜಿ ತೂಕದ ಬಾಕ್ಸ್ ಗೆ ಬರೋಬ್ಬರಿ 1,200 ರೂ ಇದೆ. ಆನ್ ಲೈನ್ ಮೂಲಕ ಖರೀದಿ ಮಾಡುವವರಿಗೆ ಡಬಲ್ ಶಾಕ್. ವಿವಿಧ ಶಾಪಿಂಗ್ ಆಪ್ ಮೂಲಕ ಟೊಮೆಟೊ ಖರೀದಿಸುವವರಿಗೆ ಕೆ.ಜಿ 80 ರೂಗೆ ಸಿಗುತ್ತಿದೆ. ಎಪಿಎಂಸಿಗೆ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಾಗಡಿ, ಚಿಂತಾಮಣಿ ಭಾಗಗಳಿಂದ ಬರುತ್ತಿದ್ದ ಟೊಮೆಟೊ ಪ್ರಮಾಣ ಶೇ.40 ರಷ್ಟು ಇಳಿಮುಖವಾಗಿದೆ.