ಬೆಂಗಳೂರು : ರಾಜ್ಯ ಸರ್ಕಾರವು (Karnataka Government) ಫ್ಲ್ಯಾಟ್ (Flat) ಖರೀದಿದಾರರಿಗೆ ಸಿಹಿಸುದ್ದಿ ನೀಡಿದ್ದು, 2020-21 ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದಂತೆ 35 ಲಕ್ಷ ರೂ.ನಿಂದ 45 ಲಕ್ಷ ರೂ. ವರೆಗಿನ ಫ್ಲ್ಯಾಟ್ ಗಳ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕವನ್ನು (Stamp fee) ಶೇ. 5 ರಿಂದ 3 ಕ್ಕೆ ಇಳಿಕೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು ನಗರ, ಬೆಂಗಳೂರು ಹೊರವಲಯ ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಅಪಾರ್ಟ್ ಮೆಂಟ್ ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಧ್ಯಮವರ್ಗದವರಿಗೆ ರಾಜ್ಯ ಸರ್ಕಾರದ ಈ ನಿರ್ಧಾರ ಅನುಕೂಲವಾಗಲಿದೆ.
ಹೊಸದಾಗಿ ನಿರ್ಮಾಣವಾದ ಅಪಾರ್ಟ್ ಮೆಂಟ್ ಗಳಲ್ಲಿ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕ ಕಡಿಮೆ ಆಗಲಿದೆ. ಪ್ರಸ್ತು ಮುದ್ರಾಂಕ ಶುಲ್ಕ ಶೇ. 5.6 ಮತ್ತು ನೋಂದಣಿ ಶುಲ್ಕ ಶೇ. 1 ಇದೆ. ಹೊಸ ಅಧಿಸೂಚನೆ ಪ್ರಕಾರ ಫ್ಲ್ಯಾಟ್ ನ ಮೊದಲನೇ ನೋಂದಣಿ ಮುದ್ರಾಂಕ ಶುಲ್ಕ ಶೇ. 3 ಕ್ಕೆ ಇಳಿಸಲಾಗಿದೆ. ಈ ಮೂಲಕ ಮುದ್ರಾಂಕ ಶುಲ್ಕ 3.36 ಆಗಲಿದೆ. ಇದರಿಂದ 35 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಖರೀದ ಮಾಡುವವರಿಗೆ ಅಂದಾಜು 70 ಸಾವಿರ ರೂ. 45 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಖರೀದಿಸುವವರಿಗೆ 90 ಸಾವಿರ ರೂ. ಉಳಿತಾಯ ಆಗಲಿದೆ ಎನ್ನಲಾಗಿದೆ.