ಮೈಸೂರು: ಜಿಲ್ಲಾಡಳಿತದ ವಿರೋಧದ ನಡುವೆಯೂ ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಮಷಿಷಾ ದಸರಾಗೆ ಚಾಲನೆ ಸಿಕ್ಕಿದ್ದು ನಗರದ ಬುದ್ಧ ವಿಹಾರದಿಂದ ಮಹಿಷಾ ಮೆರವಣಿಗೆ ಆರಂಭವಾಗಿದೆ.
ಮೊದಲ ಬಾರಿಗೆ ಮಹಿಷಾಸುರ ಪ್ರತಿಮೆ ನಿರ್ಮಿಸಿ ಮೆರವಣಿಗೆ ಮಾಡಲಾಗುತ್ತಿದ್ದು, ಮಹಿಷಾಸುರ ಪಂಚಲೋಹದ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬುದ್ದವಿಹಾರದಿಂದ ಅಶೋಕಪುರಂ ಪಾರ್ಕ್‌ವರೆಗೆ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಕಾರ್ಯಕ್ರಮದಲ್ಲಿ ಉರಿಲಿಂಗಪೆದ್ದಿ ಮಠದ ಪೀಠಾಧಿಪಾತಿ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಷಾ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್, ಇದು ಸಂಪ್ರದಾಯ ದಸರಾಗೆ ವಿರುದ್ಧ ಆಚರಣೆ ಅಲ್ಲ. ಪುರಾಣದಲ್ಲಿ ಮಹಿಷಾನನ್ನು ರಾಕ್ಷಸನಂತೆ ಬಿಂಬಿಸಲಾಗಿದೆ. ಆದರೆ ಇತಿಹಾಸ ಮಹಿಷನನ್ನು ರಾಜ ಎಂದು ಹೇಳಿದೆ. ಇತಿಹಾಸವನ್ನು ಜನತೆಗೆ ಮುಟ್ಟಿಸುವ ಸಲುವಾಗಿ ಮಹಿಷಾ ದಸರಾ ಆಚರಣೆ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಮಹಿಷಾ ದಸರಾ ಮಾಡೋಕೆ ಅಡ್ಡಿ ಉಂಟು ಮಾಡಿದೆ. ಆದರೆ ಮುಂದೆ ಕಾನೂನು ಹೋರಾಟದಲ್ಲಿ ಗೆದ್ದು ಸರ್ಕಾರವೇ ಮಹಿಷಾ ದಸರಾ ಆಚರಿಸುವಂತೆ ಮಾಡುತ್ತೇವೆ ಎಂದಿದ್ದಾರೆ.