ದಾವಣಗೆರೆ: ಇದೇ ತಿಂಗಳು 20ರ ಒಳಗಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿಯನ್ನ ನೀಡಬೇಕು. ಇಲ್ಲವಾದಲ್ಲಿ ನಾನು ಹೋರಾಟದ ನಿರ್ಧಾರ ಪ್ರಕಟ ಮಾಡಿದ್ರೆ ಒಂದು ನಾನಿರಬೇಕು. ಇಲ್ಲ, ನೀವು ಇರಬೇಕು ಎಂದು ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಿದೆ.
ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಬೆನ್ನಲ್ಲೆ ಸರ್ಕಾರಕ್ಕೆ ಮತ್ತೊಂದು ಮೀಸಲಾತಿ ತಲೆ ಬಿಸಿ ಶುರುವಾಗಿದೆ. ಅದರಂತೆ ಇದೀಗ ಬೊಮ್ಮಾಯಿ ಸರ್ಕಾರಕ್ಕೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ. ಹೋರಾಟದ ಅಂತಿಮ ನಿರ್ಧಾರ ಪ್ರಕಟಿಸುವುದ್ರೊಳಗೆ ಸಮುದಾಯಕ್ಕೆ ಮೀಸಲಾತಿ ಸಂದೇಶ ಕೊಟ್ಟರೆ ಕೃತಜ್ಞತೆ ಸಲ್ಲಿಸ್ತೇವೆ. ಇಲ್ಲವಾದರೆ ನಮ್ಮ ನಿರ್ಧಾರ ಪ್ರಕಟ ಮಾಡ್ತೇವೆ ಎಂದು ಗುಡುಗಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ‘ಜನ ಜಾಗೃತಿಗಾಗಿ ಜನ ಸ್ಪಂದನ’ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿದ್ದಾರೆ. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಕೊನೆ ಅಸ್ತ್ರ ಡು ಆರ್ ಡೈ ಪ್ರಯೋಗಿಸಿದ್ರು. ನಮ್ಮ ಸಹನೆಗೂ ಒಂದು ಮಿತಿಯಿದೆ. ನಾವು ನೂಕಿದರೆ ನೀವು ಎಲ್ಲಿ ಬೀಳ್ತಿರೋ ಗೊತ್ತಿಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Laxmi News 24×7