ಬೆಂಗಳೂರು, ಅ.1- ಇಂದಿನಿಂದ ಕ್ಲಬ್, ಪಬ್, ಚಿತ್ರಮಂದಿರ, ಧಾರ್ಮಿಕ ಕೇಂದ್ರಗಳೆಲ್ಲವೂ ಸಂಪೂರ್ಣ ತೆರೆದುಕೊಳ್ಳಲಿವೆ. ಕೊರೊನಾ ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಅ. 1ರಿಂದ ಶೇ.100ರಷ್ಟು ಅನ್‍ಲಾಕ್‍ಗೆ ರಾಜ್ಯಸರ್ಕಾರ ಸೆ.25ರಂದು ಆದೇಶ ನೀಡಿತ್ತು. ಹೀಗಾಗಿ ಇಂದಿನಿಂದ ದೇವಸ್ಥಾನ, ಚಿತ್ರಮಂದಿರ, ಪಬ್-ಕ್ಲಬ್‍ಗಳು ಸೇರಿದಂತೆ ಎಲ್ಲದಕ್ಕೂ ಸಂಪೂರ್ಣ ಅನುಮತಿ ದೊರೆಯಲಿದೆ.
ಶಾಲಾ-ಕಾಲೇಜುಗಳು ಶೇ.100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕಿದ್ದು, ಸೋಮವಾರದಿಂದ ಶುಕ್ರವಾರದವರೆಗೆ 5 ದಿನಗಳ ಕಾಲ ಶಾಲೆಗಳು ಸಂಪೂರ್ಣವಾಗಿ ನಡೆಯಲಿವೆ. ಈ ನಿಟ್ಟಿನಲ್ಲಿ ಇಂದಿನಿಂದ ಎಲ್ಲವೂ ಅನ್‍ಲಾಕ್ ಆಗುತ್ತಿವೆ.
6ರಿಂದ 12ನೇ ತರಗತಿವರೆಗಿನ ಶಾಲೆಗಳು ಈಗಾಗಲೇ ಆರಂಭವಾಗಿದ್ದು, 1ರಿಂದ 5ನೇ ತರಗತಿವರೆಗಿನ ಶಾಲೆಗಳನ್ನು ಆರಂಭಿಸುವ ಬಗ್ಗೆಯೂ ಸರ್ಕಾರ ಚರ್ಚೆ ನಡೆಸಿದೆ. ಸಂಪೂರ್ಣ ಅನ್‍ಲಾಕ್ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಶೇ.100ರಷ್ಟು ಆಸನಗಳ ಭರ್ತಿಗೆ ಅವಕಾಶ ಸಿಕ್ಕಿತ್ತು. ಗಾಂಧಿನಗರದಲ್ಲಿ ಮತ್ತೆ ಸಡಗರ ಮನೆ ಮಾಡಿದೆ. ಕಳೆದ ಒಂದೂವರೆ ವರ್ಷದಿಂದ ಕೊರೊನಾ ಕಾಟಕ್ಕೆ ನಲುಗಿ ಹೋಗಿದ್ದ ಚಿತ್ರರಂಗದಲ್ಲಿ ಭರವಸೆಯ ಬೆಳಕು ಮೂಡಿದೆ. ಹಲವಾರು ಚಿತ್ರಗಳು ತೆರೆ ಕಾಣಲು ಸಿದ್ದವಾಗಿವೆ.
ಪ್ರೇಕ್ಷಕರನ್ನು ಸ್ವಾಗತಿಸಲು ಚಿತ್ರಮಂದಿರಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿವೆ. ಚಿತ್ರಮಂದಿರಗಳ ಜೊತೆಗೆ ಧಾರ್ಮಿಕ ಕ್ಷೇತ್ರದ ಚಟುವಟಿಕೆಗಳಿಗೂ ಸರ್ಕಾರ ಸಂಪೂರ್ಣ ಅನುಮತಿ ಕೊಟ್ಟಿದೆ. ಕೊರೊನಾ 2ನೇ ಅಲೆ ವೇಳೆ ಬಂದಾಗಿದ್ದ ದೇವಸ್ಥಾನ ಮತ್ತು ಇತರೆ ಧಾರ್ಮಿಕ ದೇವಾಲಯಗಳನ್ನು ಹಂತಹಂತವಾಗಿ ಪ್ರಾರಂಭಿಸಲು ಅನುಮತಿ ನೀಡಲಾಗಿತ್ತು. ಇದೀಗ ನಿರ್ಬಂಧವನ್ನು ಸಂಪೂರ್ಣ ತೆರವುಗೊಳಿಸಲಾಗಿದೆ.
ಈ ಎಲ್ಲದರ ನಡುವೆಯೂ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರಲಿದೆ.