ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ನೀಡಿದ ಬಂದ್ ಬೆಂಗಳೂರಿನಲ್ಲಿ ಠುಸ್ ಪಟಾಕಿಯಾಗಿದೆ.
ನಗರದ ಜನ ಜೀವನ ಎಂದಿನಂತೆ ಸಾಗುತ್ತಿದೆ. ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ಜನ ಪ್ರತಿದಿನದಂತೆ ಸಂಚರಿಸುತ್ತಿದ್ದಾರೆ. ಪ್ರತಿಭಟನೆಯಿಂದ ಬಸ್ ತಡೆಯಬಾರದು ಎಂಬ ಕಾರಣಕ್ಕೆ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ರೈಲ್ವೇಗೂ ಬಂದ್ ಬಿಸಿ ತಟ್ಟಿಲ್ಲ. ಪ್ರಯಾಣಿಕರ ಸೇವೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಹೂವು, ಹಣ್ಣಿನ ಮಾರುಕಟ್ಟೆಗಳಿಗೆ ಜನ ಬರುತ್ತಿದ್ದು ಎಂದಿನಂತೆ ವ್ಯಾಪಾರ ನಡೆಯುತ್ತಿದೆ. ರಸ್ತೆ ಸಂಚಾರದಲ್ಲೂ ಯಾವುದೇ ವ್ಯತ್ಯಯವಾಗಿಲ್ಲ. ಬಸ್, ರಿಕ್ಷಾ, ಕಾರು, ಬೈಕುಗಳು ಪ್ರತಿದಿನದಂತೆ ರಸ್ತೆಯಲ್ಲಿ ಸಂಚರಿಸುತ್ತಿವೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬೆಂಗಳೂರು ನಗರದಲ್ಲಿ 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬೆಳಗ್ಗೆಯಿಂದಲೇ ನಿಂತಿದ್ದು ಸಂಚಾರ ಸುಗಮವಾಗಿ ನಡೆಯುತ್ತಿದೆ.